ಹೊಸಬರೇ ಸೇರಿ ನಿರ್ಮಿಸಿ, ನಟಿಸಿರುವ ’ಲೈಫ್ ಆಫ್ ಮೃದುಲ’ ಸಿನಿಮಾದ ಪ್ರಚಾರದ ಮೊದಲ ಹಂತವಾಗಿ ಹಾಡು ಬಿಡುಗಡೆ ಸಮಾರಂಭವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಸೆನ್ಸಾರ್‌ನಿಂದ ಪ್ರಶಂಸೆ ಪಡೆದುಕೊಂಡ ಚಿತ್ರವನ್ನು ಆಗಸ್ಟ್ ತಿಂಗಳಲ್ಲಿ ತೆರೆಗೆ ತರಲು ನಿರ್ಮಾಪಕರು ಯೋಜನೆ ರೂಪಿಸಿಕೊಂಡಿದ್ದಾರೆ.
ಈ ಸಿನಿಮಾವನ್ನು ಮದನ್ ಮೂವೀಸ್ ಬ್ಯಾನರ್ನಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮದನ್‌ಕುಮಾರ್.ಸಿ ಅವರೇ ನಿರ್ಮಾಪಕ ಮತ್ತು ನಾಯಕ. ಸಂಭಾಷಣೆ ಬರೆದಿರುವ ಯೋಗಿದೇವಗಂಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ ಕೋಲಾರದ ಚೇತನ್ ತ್ರಿವೇಣ್ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಸಾಹಸ ಹಾಗೂ ಆಕ್ಷನ್ ಕಟ್ ಹೇಳಿದ್ದಾರೆ.
ಕಾಂಗ್ರೆಸ್ ಯುವ ಮುಖಂಡ ಮೊಹ್ಮದ್ ನಲಪಾಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹಾಡು ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ, ’ಬಗ್ಸೋದೇ ಬಡಿಯೋದೆ’ ಹಾಡಿನ ಸಾಲು ಯುವ ಜನಾಂಗಕ್ಕೆ ತಪ್ಪು ಸಂದೇಶ ಸಾರುತ್ತದೆ. ಇದನ್ನು ಯುವಕರಿಗೆ ತೋರಿಸಬಾರದು, ಮಾಡಬಾರದು. ಈಗಾಗಲೇ ಅದರ ಅನುಭವ ಪಡೆದಿದ್ದೇನೆ. ರ‍್ಯಾಪ್ ಸಾಂಗ್ ಅಂದರೆ ತಕ್ಷಣ ವೈಯಲೆಂಟ್ ಆಗಿರಬೇಕು ಎಂದು ಯಾರೂ ಹೇಳಿಲ್ಲ. ಒಳ್ಳೆತನದಲ್ಲೂ ರ‍್ಯಾಪ್ ಮಾಡಬಹುದು. ಇಂತಹ ಪದಗಳು ಬದಲಾದರೆ, ಮುಂದಿನ ತಲಮಾರು ಬದಲಾವಣೆ ಆಗಲು ಸಾಧ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಒಳ್ಳೆತನ ಬೆಳೆಸೋಣ, ಮಾಡೋಣವೆಂದು ತಂಡಕ್ಕೆ ಶುಭ ಹಾರೈಸಿದರು.
ಈ ಸಿನಿಮಾ ಕಾಲ್ಪನಿಕ ಡಾರ್ಕ್ ಡ್ರಾಮಾ ಜಾನರ್‌ನ ಕಥೆಯಾಗಿದ್ದು, ಮೃದುಲಾ ಎಂಬುವಳ ಜೀವನದಲ್ಲಿ ಎದುರಾಗುವ ಮೂರು ವಿಭಿನ್ನ ಕಾಲ ಘಟ್ಟಗಳು ಬರುತ್ತದೆ. ಆಕೆಗೆ ಬದುಕಲ್ಲಿ ಅನಿರೀಕ್ಷಿತವಾಗಿ ಬರುವ ಸವಾಲನ್ನು ಯಾವ ರೀತಿ ಎದುರಿಸುತ್ತಾಳೆ ಎಂಬುದನ್ನು ಕುತೂಹಲ ತಿರುವುಗಳ ಮೂಲಕ ಥ್ರಿಲ್ಲರ್ ರೂಪದಲ್ಲಿ ತೋರಿಸಲಾಗಿದೆ.
ಲೈಫ್ ಆಫ್ ಮೃದುಲ ಸಿನಿಮಾಕ್ಕೆ ನಾಯಕಿಯಾಗಿ ಪೂಜಾ ಲೋಕಾಪುರ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಆಶಾಸುಜಯ್, ಶಶಾಂಕ್, ಕುಲದೀಪ್, ಯೋಗಿದೇವಗಂಗೆ, ಅನೂಪ್‌ಥಾಮಸ್, ಪ್ರೀತಿಚಿದಾನಂದ್, ಶರೀಫ್ ಮುಂತಾದವರು ನಟಿಸಿದ್ದಾರೆ. ರಾಹುಲ್.ಎಸ್.ವಾಸ್ತರ್ ಸಂಗೀತ , ಛಾಯಾಗ್ರಹಣ ಅಚ್ಚುಸುರೇಶ್, ಸಂಕಲನ ವಸಂತಕುಮಾರ್.ಕೆ ಅವರದಾಗಿದೆ. ಬೆಂಗಳೂರು, ಕುಂದಾಪುರ ಸುಂದರ ತಾಣಗಳಲ್ಲಿ 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಇದನ್ನೂ ಓದಿ : ಭರ್ತಿಯತ್ತ KRS ಜಲಾಶಯ – ಕಾವೇರಿ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ..!