ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೆ ಮಠ ರಾಜಕೀಯ ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಜೆಡಿಎಸ್-ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಒಕ್ಕಲಿಗರ ಪ್ರಭಾವಿ ಮಠಾಧೀಶರಾಗಿರುವ ಆದಿ ಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿಯ ಭೇಟಿಗೆ ಮುಗಿ ಬೀಳುತ್ತಿದ್ದಾರೆ. ಅಭ್ಯರ್ಥಿಗಳ ಈ ಭೇಟಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳ ನಡುವಿನ ವಾಕ್ಸಮರಕ್ಕೆ ದಾರಿ ಮಾಡಿಕೊಟ್ಟಿದೆ.
ಇದೀಗ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಕುಮಾರಸ್ವಾಮಿ ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಂದು ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ದವರು ಇಂದು ಆಶೀರ್ವಾದ ಪಡೆಯಲು ಮಠಕ್ಕೆ ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನಾವು ಸಹ ಜೆಎಸ್‌ಎಸ್, ಸಿದ್ದಗಂಗಾ, ಚುಂಚನಗಿರಿ ಮಠಗಳಿಗೆ ನಾವು ಹೋಗುತ್ತೇವೆ, ಅವರು ಹೋಗಿದ್ದಾರೆ. ಇದು ಚುನಾವಣೆ ವೇಳೆ ಸಹಜವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಕುಮಾರಸ್ವಾಮಿ, ಸ್ವಾಮೀಜಿ ಫೋನ್ ಟ್ಯಾಪ್ ಮಾಡಿದ್ದಾರೆ. ಸ್ವಾಮೀಜಿಗಳು ಯಾರಿಗೂ ಪ್ರಚಾರ ಮಾಡೋಕೆ ಆಗಲ್ಲ. ಚುಂಚನಗಿರಿ ಮಠ ಒಕ್ಕಲಿಗ ಸಮುದಾಯ ಮಠ ಆದ್ರೂ ಸಹ ರಾಜ್ಯದಲ್ಲಿ ಅತ್ಯಂತ ಜಾತ್ಯತೀತ ಮಠವಾಗಿದೆ. ಎಲ್ಲಾ ಜಾತಿಗಳನ್ನು ಪ್ರೀತಿಸಿ ಬೆಳೆಸಿದವರು ಬಾಲಗಂಗಾಧರನಾಥ ಶ್ರೀಗಳು. ಜೆಡಿಎಸ್‌ನವರು ಬಾಲಗಂಗಾಧರ ಶ್ರೀಗಳಿಗೆ ಎಷ್ಟು ಕಿರುಕುಳ ಕೊಟ್ಟರು ಎಂದು ಸಹ ಗೊತ್ತಿದೆ. ಅಂದು ಆದಿ ಚುಂಚನಗಿರಿ ಮಠವನ್ನು ವಿಭಜಿಸಿದ್ದರು, ಈಗ ಚುನಾವಣೆ ಬಂದಿದೆ. ಅದಕ್ಕೆ ಮಠಕ್ಕೆ ಕುಮಾರಸ್ವಾಮಿ ಹೋಗ್ತಾ ಇದ್ದಾರೆ ಅಷ್ಟೇ ಎಂದು ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
‘2004ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದಿದ್ದಾಗ ಎಸ್.ಎಂ.ಕೃಷ್ಣ ಅವರು ಜೆಡಿಎಸ್ ಬೆಂಬಲ ಕೋರಿದ್ದರು. ಒಕ್ಕಲಿಗ ನಾಯಕರಾದ ಎಸ್.ಎಂ.ಕೃಷ್ಣ ಅವರನ್ನು ಇನ್ನೊಂದು ಅವಧಿಗೆ ಮುಖ್ಯಮಂತ್ರಿ ಮಾಡುವ ಅವಕಾಶ ಜೆಡಿಎಸ್‌ಗೆ ಇತ್ತು. ಆದರೆ ಬೆಂಬಲ ನೀಡಲಿಲ್ಲ’ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರನ್ನಾದರೂ ಸಿ.ಎಂ ಮಾಡುವ ಆಯ್ಕೆ ಇತ್ತು. ಆಗ ನಾನು ಜೆಡಿಎಸ್‌ನಲ್ಲೇ ಇದ್ದೆ. ತಾವು ಹೇಳಿದಂತೆ ಕೇಳಬೇಕು ಎನ್ನುವ ಕಾರಣಕ್ಕೆ ದೇವೇಗೌಡರು ಧರಂ ಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಿದರು.
ಫೋನ್ ಟ್ಯಾಪಿಂಗ್ ಮಾಡಿದ್ದಕ್ಕೆ ಸೂಕ್ತ ದಾಖಲೆಗಳು ಇವೆ : ಡಿಸಿಎಂ ಡಿಕೆಶಿ – ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ಟ್ಯಾಪಿಂಗ್ ಕುರಿತು ದಾಖಲೆಗಳಿವೆ. ಸೂಕ್ತ ಸಮಯದಲ್ಲಿ ದಾಖಲೆ ಸಮೇತ ಮಾತನಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಫೋನ್ ಟ್ಯಾಪಿಂಗ್ ಕುರಿತು ಸಚಿವ ಚಲುವರಾಯಸ್ವಾಮಿ ಅವರ ಆರೋಪ ಹಾಗೂ ಅದಕ್ಕೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ಅವರು, ಸ್ವಾಮೀಜಿಯವರ ಫೋನ್ ಟ್ಯಾಪಿಂಗ್ ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಮಾತನಾಡಲು ತುಂಬಾ ನೋವಾಗುತ್ತದೆ. ಫೋನ್ ಟ್ಯಾಪಿಂಗ್ ಬಗ್ಗೆ ಎಲ್ಲಾ ದಾಖಲೆಗಳು ಇವೆ. ಆದರೂ ಈ ವಿಚಾರವನ್ನು ಈಗ ಮಾತನಾಡುವುದು ಸೂಕ್ತವಲ್ಲ, ಸಮಯ ಬಂದಾಗ ಮಾತನಾಡುತ್ತೇನೆ ಎಂದರು.
ಇದನ್ನೂ ಓದಿ : ಎಲೆಕ್ಷನ್ ಡ್ಯೂಟಿಗೆ ಹೋಗುತ್ತಿದ್ದಾಗ ಭೀಕರ ಅಪಘಾತ – ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ ಸೇರಿ ಮೂವರು ಸಾ*ವು..!