ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಜೀವನದಿ ಕಾವೇರಿ ಅಪಾಯದ ಮಟ್ಟ ಮೀರಿ ಮೈದುಂಬಿ ಹರಿಯುತ್ತಿದ್ದಾಳೆ. ಅಷ್ಟೇ ಅಲ್ಲ ನದಿ ತಟದಲ್ಲಿ ಪ್ರವಾಹ ಭೀತಿಯನ್ನು ಕೂಡ ಸೃಷ್ಠಿ ಆಗಿದೆ. ಈ ಮಧ್ಯೆ ಸಂಪೂರ್ಣ ಭರ್ತಿಯಾಗಿರುವ ಕನ್ನಂಬಾಡಿ ಅಣೆಕಟ್ಟಿಗೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಾಗಿನ ಅರ್ಪಿಸಲಿದ್ದಾರೆ.
ಎರಡು ವರ್ಷಗಳ ನಂತರ ಹಳೇ ಮೈಸೂರು ಭಾಗದ ಜೀವನದಿ ಕಾವೇರಿ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆ, ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೆಆರ್ಎಸ್ ಜಲಾಶಯದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಬೆಳಗ್ಗೆ 11 ಗಂಟೆಗೆ ಅಭಿಜನ್ ಲಗ್ನದಲ್ಲಿ ಬಾಗಿನ ಅರ್ಪಿಸಲಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಮೂರನೇ ಬಾರಿಗೆ ಕೆಆರ್ಎಸ್ಗೆ ಬಾಗಿನ ಅರ್ಪಿಸುತ್ತಿದ್ದಾರೆ.
ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ. ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದ ವೈದಿಕರ ತಂಡ ಈಗಾಗಲೇ ಪೂಜಾ ಹಾಗೂ ಬಾಗಿನದ ಸಾಮಗ್ರಿಗಳನ್ನು ಸಿದ್ಧಪಡಿಸಿದೆ. ಜಲಾಶಯದ ಕೆಳ ಭಾಗದಲ್ಲಿರುವ ಕಾವೇರಿ ಮಾತೆ ಪ್ರತಿಮೆ ಬಳಿ ವಿಶೇಷ ಪೂಜೆ ಸಲ್ಲಿಸಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿದೆ. ಪೂಜಾ ಸ್ಥಳವನ್ನು ತಳಿರು ತೋರಣ ಹಾಗೂ ವಿಶೇಷ ಹೂವುಗಳಿಂದ ಅಲಂಕರಿಸಲಾಗಿದೆ.
ಮುಖ್ಯಮಂತ್ರಿ ಹಾಗೂ ಸಂಪುಟ ಸಹೋದ್ಯೋಗಿಗಳನ್ನು ಹೊರತುಪಡಿಸಿ ಕಾರ್ಯಕರ್ತರು ಮತ್ತು ಇತರರಿಗೆ ಅಣೆಕಟ್ಟೆಯ ಮೇಲ್ಬಾಗಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ. ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಕಾವೇರಿ ನದಿಗೆ ಒಂದು ಲಕ್ಷ ಮೂವತ್ತು ಸಾವಿರ ಕ್ಯೂಸೆಕ್ ನೀರನ್ನ ಹರಿಬಿಡಲಾಗಿದೆ. ಹೀಗಾಗಿ ಜೀವನದಿ ಕಾವೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇದನ್ನೂ ಓದಿ : ವಾಲ್ಮೀಕಿ ಹಗರಣದಲ್ಲಿ ಬ್ಯಾಂಕಿನವರು ತಪ್ಪು ಮಾಡಿದ್ರೂ ಬಿಡಲ್ಲ- ಸಿಎಂ ಸಿದ್ದು ಆರೋಪಕ್ಕೆ ನಿರ್ಮಲಾ ಸೀತಾರಾಮನ್ ರಿಯಾಕ್ಷನ್..!