ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಟಕ ಸರ್ಕಾರದ ಹೊಸ ಮಸೂದೆಯ ವಿರುದ್ಧ ಫೋನ್ ಪೇ ಸಿಇಓ ಸಮೀರ್ ನಿಗಮ್ ಕಮೆಂಟ್ ಮಾಡಿದ್ದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ವಿರುದ್ಧ ಬಾಯ್ಕಾಟ್ ಅಭಿಯಾನಗಳೂ ಶುರುವಾಗಿವೆ.
ಈ ನಿಟ್ಟಿನಲ್ಲಿ ಫೋನ್ ಪೇ ಸಂಸ್ಥೆಯ ಕರ್ನಾಟಕದ ರಾಯಭಾರಿಯಾಗಿರುವ ಕಿಚ್ಚ ಸುದೀಪ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ಬಹುತೇಕರ ಪ್ರಶ್ನೆಯಾಗಿತ್ತು. ಮೂಲಗಳ ಪ್ರಕಾರ ಫೋನ್ ಪೇ ಕನ್ನಡಿಗರ ಕ್ಷಮೆ ಕೋರಿ, ರಾಜ್ಯ ಸರ್ಕಾರದ ನಿಲುವಿಗೆ ಬದ್ದವಾಗದಿದ್ದರೆ ಕಿಚ್ಚ ಸುದೀಪ್ ಅವರು ಫೋನ್ ಪೇ ರಾಯಭಾರತ್ವದಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹಾಗೆ ನೋಡಿದರೆ ಕಿಚ್ಚ ಸುದೀಪ್ ಅವರು ಹಣಕ್ಕಿಂತ ಕಲೆ, ಭಾಷೆಯನ್ನು ಹೆಚ್ಚು ಗೌರವಿಸುತ್ತಾ ಬಂದವರು. ದುಡ್ಡೇ ಮುಖ್ಯ ಅನ್ನೋದಾಗಿದ್ದರೆ ಕಿಚ್ಚ ಸುದೀಪ್ ನಟನೆಯ ಸಿನಿಮಾಗಳ ಸಂಖ್ಯೆ ಈ ಹೊತ್ತಿಗೆ ದುಪ್ಪಟ್ಟಾಗಿರುತ್ತಿತ್ತು. ಬೇಕಾದಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬಹುದಿತ್ತು. ತಮ್ಮ ಅಭಿಮಾನಿಗಳಿಗೆ ಉತ್ತಮ ಸಂದೇಶವನ್ನಷ್ಟೇ ನೀಡಬೇಕು ಅಂತಾ ಬಯಸಿದವರು ಸುದೀಪ್. ನಾಡು ನುಡಿಯ ವಿಚಾರ ಬಂದಾಗ ಕೂಡಾ ಮುಂಚೂಣಿಯಲ್ಲಿ ನಿಂತವರು. ಹೀಗಿರುವಾಗ, ಫೋನ್ ಪೇ ಸಿಇಓ ತಮ್ಮ ನಿಲುವನ್ನು ಬದಲಿಸಿಕೊಳ್ಳಲಿದ್ದರೆ, ಮುಂದಿನ ದಿನಗಳಲ್ಲಿ ಕಿಚ್ಚ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿ ಹೊರಬರುವ ಸಾಧ್ಯತೆಗಳಿವೆ ಅನ್ನೋದು ಸದ್ಯ ಕೇಳಿಬರುತ್ತಿರುವ ಮಾಹಿತಿ.
ಸಮೀರ್ ಎಕ್ಸ್ ಪೋಸ್ಟ್ ಏನು?
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವ ಸಮಯದಲ್ಲೇ Phonepe ಸಿಇಎ ಸಮೀರ್ ನಿಗಮ್ ಅಸಮಾಧಾನ ಹೊರ ಹಾಕಿದ್ದರು. ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಅವರು, ‘ನನಗೆ ಈಗ 46 ವರ್ಷ. 15 ವರ್ಷಕ್ಕಿಂತ ಹೆಚ್ಚು ಕಾಲ ಯಾವ ರಾಜ್ಯಗಳಲ್ಲಿಯೂ ಉಳಿದಿಲ್ಲ. ನನ್ನ ತಂದೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರನ್ನು ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ನಿಯೋಜನೆ ಮಾಡುತ್ತಿದ್ದರು.
ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಒಂದು ಸಂಸ್ಥೆಯನ್ನು ಕಟ್ಟಿದ್ದೇನೆ. ದೇಶದಾದ್ಯಂತ 25 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೇನೆ. ನನ್ನ ಮಕ್ಕಳು ಅವರ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?’ ಶೇಮ್.. ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ : ಚಿತ್ರದುರ್ಗ : ಪೊಲೀಸ್ ಜೀಪ್ ಮೇಲೆ ಕಲ್ಲು ತೂರಿ ಕಳ್ಳರ ಗ್ಯಾಂಗ್ ಎಸ್ಕೇಪ್..!