ಉತ್ತರಕನ್ನಡ : ಶಿರೂರು ಗುಡ್ಡ ಕುಸಿತದ ಬೆನ್ನಲ್ಲೇ ಕಾರವಾರದ ಕಾಳಿ ಸೇತುವೆ ನಿನ್ನೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕುಸಿದು ಬಿದ್ದಿದೆ. ಕಾರವಾರದ ಸದಾಶಿವಘಡ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಈ ಸೇತುವೆಯನ್ನು ಸುಮಾರು 50 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು.
ಸತತ ಮಳೆ ಹೊಡೆತಕ್ಕೆ ಸೇತುವೆ ಕುಸಿದಿದ್ದು, ಪರಿಣಾಮ ಗೋವಾದಿಂದ ಮಂಗಳೂರು ಕಡೆ ಚಲಿಸುತ್ತಿದ್ದ ಟ್ರಕ್ವೊಂದು ಕಾಳಿ ನದಿಯಲ್ಲಿ ಮುಳುಗಡೆಯಾಗಿದೆ. ಟ್ರಕ್ ಡ್ರೈವರ್ ಕೇರಳ ಮೂಲದ ರಾಧಾಕೃಷ್ಣ ನಾಳಸ್ವಾಮಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಭವಿಸುವ ವೇಳೆ ಬೈಕ್ ಹಾಗೂ ಕಾರು ಕೂಡ ಇದೇ ಸೇತುವೆ ಮೇಲೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದ್ದು, ಅವರು ಸ್ವಲ್ಪದರಲ್ಲೇ ಮುಂದೆ ಸಾಗಿದ್ದಾರೆ. ಸದ್ಯ ಟ್ರಕ್ ನೀರಿನಲ್ಲಿ ಬಿದ್ದಿದ್ದು, ನದಿಯಲ್ಲಿ ಮತ್ಯಾವುದಾದರೂ ವಾಹನಗಳಿವೆಯಾ ಎಂಬ ಬಗ್ಗೆ ಸ್ಥಳೀಯ ಮೀನುಗಾರರ ಜೊತೆ ಪೊಲೀಸರು ದೋಣಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ.
ಇನ್ನು ಸ್ಥಳೀಯ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕರ್ನಾಟಕ-ಗೋವಾ ಸಂಪರ್ಕಿಸುವ ಸೇತುವೆ ಕುಸಿದಿರೋದ್ರಿಂದ ಸಂಚಾರ ಅಸ್ತವ್ಯಸ್ತವಾಗಿದೆ. ನದಿ ಮತ್ತು ಸಮುದ್ರದ ಸಂಗಮ ಸ್ಥಳದ ಮೇಲೆ ಸೇತುವೆಯನ್ನು ನಿರ್ಮಿಸಿರುವುದರಿಂದ ಇದು ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿತ್ತು.
ರಾಷ್ಟ್ರೀಯ ಹೆದ್ದಾರಿ 66ರ ಈ ಸೇತುವೆ ಸುಮಾರು 50 ವರ್ಷ ಹಳೆಯದಾಗಿತ್ತು. ಕಳೆದ ಎರಡು ವರ್ಷದ ಹಿಂದೆ ರಿಪೇರಿ ಕೂಡ ಮಾಡಲಾಗಿತ್ತು. ಈ ಸೇತುವೆ ಮೇಲೆ ಅನೇಕ ಕನ್ನಡ ಹಾಗೂ ಹಿಂದಿ ಸಿನಿಮಾ ಶೂಟಿಂಗ್ ಆಗಿದ್ದವು. ನದಿಯು ಸಮುದ್ರವನ್ನು ಸೇರುವ ಸ್ಥಳ ಈ ಸೇತುವೆಯಿಂದ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಇದನ್ನೂ ಓದಿ : ಬೆಂಗಳೂರು : ರೌಡಿಶೀಟರ್ ಹತ್ಯೆ ಕೇಸ್‌ನಲ್ಲಿ ಆರು ಮಂದಿ ಬಂಧನ..!