ಬಹುನಿರೀಕ್ಷಿತ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟಗೊಂಡಿದ್ದು, ಈ ಬಾರಿ ಸ್ಯಾಂಡಲ್‌ವುಡ್‌ಗೆ ಪ್ರಶಸ್ತಿಗಳ ಸುರಿಮಳೆಯೇ ಸುರಿದಿದೆ. ಅತ್ಯುತ್ತಮ ಚಿತ್ರ ಕಾಂತಾರ, ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿಗೆ ಒಲಿದು ಬಂದಿದೆ.
ಕನ್ನಡ ಸಿನಿಮಾ ನಟರೊಬ್ಬರಿಗೆ ರಾಷ್ಟ್ರಪ್ರಶಸ್ತಿ ದೊರೆತು ದಶಕಗಳೇ ಆಗಿಬಿಟ್ಟಿದ್ದವು. ಆ ಬರವನ್ನು ಈಗ ನೀಗಿದ್ದು, ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಈ ವರ್ಷ ರಿಷಬ್ ಶೆಟ್ಟಿಗೆ ಮಲಯಾಳಂ ನಟ ಮಮ್ಮುಟಿ, ಹಿಂದಿಯ ವಿಕ್ರಾಂತ್ ಮೆಸ್ಸಿ ಇನ್ನೂ ಹಲವು ನಟರಿಂದ ಸ್ಪರ್ಧೆ ಇತ್ತು. ಆದರೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಒಲಿದಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಈ ಬಗ್ಗೆ ಬಿಟಿವಿ ಬಳಿ ಖುಷಿ ಹಂಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭ್ಯವಾಗಿದೆ. ರಿಷಬ್ ಶೆಟ್ಟಿ ‘ಕಾಂತಾರ’ ಸಿನಿಮಾವನ್ನು ನಿರ್ದೇಶನ ಮಾಡಿ ನಟನೆಯನ್ನೂ ಮಾಡಿದ್ದರು. ಆ ಸಿನಿಮಾದಲ್ಲಿ ಬೇಜವಾಬ್ದಾರಿಯುತ, ಸಿಡುಕು ಸ್ವಭಾವದ, ತಮಾಷೆ ಸ್ವಭಾವದ ಕಾಡುಬೆಟ್ಟು ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ಸಿನಿಮಾದಲ್ಲಿ ದೈವದ ವೇಷಧಾರಿಯಾಗಿ ಅಂತಿಮ ದೃಶ್ಯಗಳಲ್ಲಿ ಗುಳಿಗ ಮೈಮೇಲೆ ಬಂದಾಗಿನ ಅವರ ಅದ್ಭುತ ನಟನೆ ಇವೆಲ್ಲವನ್ನೂ ಪರಿಗಣಿಸಿ ರಿಷಬ್ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಲಾಗದೆ. ಕಳೆದ ವರ್ಷ ರಾಷ್ಟ್ರಪ್ರಶಸ್ತಿಯಲ್ಲಿ ಪುಷ್ಪ ಸಿನಿಮಾದ ಅತ್ಯುತ್ತಮ ನಟನೆಗಾಗಿ ಅಲ್ಲು ಅರ್ಜುನ್ ಅವರಿಗೆ ನೀಡಲಾಗಿತ್ತು. ಈ ಬಾರಿ ರಿಷಬ್ ಶೆಟ್ಟಿ ಪಾಲಾಗಿದೆ.
ಅತ್ಯುತ್ತಮ ನಟ ಜೊತೆಗೆ ಅತ್ಯುತ್ತಮ ಮನೋರಂಜನಾ ಪ್ರಶಸ್ತಿಗೆ ಕಾಂತಾರ ಸಿನಿಮಾ ಆಯ್ಕೆಯಾಗಿದೆ. ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ, ಕೇವಲ 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ, ಬರೋಬ್ಬರಿ 400 ಪ್ಲಸ್ ಕೋಟಿ ಗಳಿಕೆ ಕಂಡಿತ್ತು. 2022ರ ಸೆಪ್ಟೆಂಬರ್ 22ರಂದು ಕನ್ನಡದಲ್ಲಿ ಮಾತ್ರ ತೆರೆಕಂಡಿದ್ದ ಈ ಸಿನಿಮಾ, ಅದಾದ ಬಳಿಕ ಬೇರೆ ಭಾಷೆಗಳಿಗೂ ಡಬ್ ಆಗಿ ಮೋಡಿ ಮಾಡಿತ್ತು. ಇದೀಗ ಇದೇ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಗರಿ ಮುಡಿಗೇರಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮೈ ನವಿರೇಳಿಸುವಂತೆ ನಟಿಸಿದ್ದರು.
ರಿಷಬ್ ಶೆಟ್ಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೂರನೇ ನಟ ಎನಿಸಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್, ಸಂಚಾರಿ ವಿಜಯ್ ಬಳಿಕ ರಿಷಬ್ಗೆ ರಾಷ್ಟ್ರೀಯ ಪ್ರಶಸ್ತಿ ಕಿರೀಟ ಒಲಿದು ಬಂದಿದೆ. ಪುನೀತ್ ರಾಜ್ಕುಮಾರ್ ಬೆಟ್ಟದ ಹೂವು ಸಿನಿಮಾದಲ್ಲಿ ಬಾಲನಟನಾಗಿ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದರು. ‘ನಾನು ಅವನಲ್ಲ-ಅವಳು’ ಸಿನಿಮಾ ನಟನೆಗಾಗಿ ಸಂಚಾರಿ ವಿಜಯ್ಗೆ ಕಿರೀಟ ಲಭಿಸಿತ್ತು, ಇದೀಗ ಕಾಂತಾರದ ಅದ್ಭುತ ನಟನೆಗಾಗಿ ರಿಷಬ್ ಶೆಟ್ಟಿಗೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಗಳ ವಿವರ :
ಅತ್ಯುತ್ತಮ ನಟ, ರಿಷಬ್ ಶೆಟ್ಟಿ
ಅತ್ಯುತ್ತಮ ಮನೋರಂಜನಾ ಚಿತ್ರ; ಕಾಂತಾರ
ಅತ್ಯುತ್ತಮ ಕನ್ನಡ ಚಿತ್ರ: ಕೆಜಿಎಫ್ 2
ಅತ್ಯುತ್ತಮ ನಿರ್ದೇಶಕ ಬಸ್ತಿ ದಿನೇಶ್ ಶೆಣೈ – ಮಧ್ಯಂತರ ಸಿನಿಮಾ
ಅತ್ಯುತ್ತಮ ಸಂಕಲನಕಾರ ಸುರೇಶ್ ಅರಸ್
ಅತ್ಯುತ್ತಮ ಸಹಾಯಕ ನಟಿ, ನೀನಾ ಗುಪ್ತ
ಅತ್ಯುತ್ತಮ ಸಹಾಯಕ ನಟ , ಪವನ ರಾಜ್
ಅತ್ಯುತ್ತಮ ನಾಯಕಿ, ನಿತ್ಯಾ ಮೆನನ್ ಹಾಗೂ ಮಾನ್ಸಿ ಪರೆಖ್
ಅತ್ಯುತ್ತಮ ಸಿನಿಮಾ AVGC, ಬ್ರಹಾಸ್ತ್ರ (ಹಿಂದಿ)
ಅತ್ಯುತ್ತಮ ಫೀಚರ್ ಫಿಲ್ಮ್: ಕಚ್ ಎಕ್ಸ್‌ಪ್ರೆಸ್(ಗುಜರಾತಿ)
ಅತ್ಯುತ್ತಮ ನಿರ್ದೇಶಕ, ಸೂರಜ್ ಬರ್ಜಾತ್ಯ( ಉಂಚಾಯಿ ಚಿತ್ರ)
ಅತ್ಯುತ್ತಮ ಮಲೆಯಾಳಂ ಚಿತ್ರ, ಆಟಂ
ಅತ್ಯುತ್ತಮ ಪ್ಲೇಬ್ಯಾಕ್ ಸಿಂಗರ್, ಅರಿಜಿತ್ ಸಿಂಗ್
ಅತ್ಯುತ್ತಮ ಸಂಗೀತ ನಿರ್ದೇಶಕ, ಪ್ರೀತಮ್( ಬ್ರಹ್ಮಾಸ್ತ್ರ)
ಇದನ್ನೂ ಓದಿ : ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಗರಿಗರಿ ನೋಟುಗಳಿಂದ ಬನಶಂಕರಿ ದೇವಿಗೆ ವಿಶೇಷ ಅಲಂಕಾರ..!