ನವದೆಹಲಿ : 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಈ ಬಾರಿ ಕನ್ನಡ ಚಿತ್ರರಂಗಕ್ಕೆ ಹಲವು ಪ್ರಶಸ್ತಿಗಳು ಅರಸಿ ಬಂದಿದೆ. ಕಾಂತಾರ ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದ್ರೆ, ಅತ್ಯುತ್ತಮ ಕನ್ನಡ ಚಿತ್ರದ ರಾಷ್ಟ್ರೀಯ ಪ್ರಶಸ್ತಿ ಕೆಜಿಎಫ್-2ಗೆ ಲಭಿಸಿದೆ. ಕೇಂದ್ರ ಸರ್ಕಾರದ ವಾರ್ತಾ, ಪ್ರಸಾರ ಇಲಾಖೆಯಿಂದ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದೆ. 2022ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಬಿಡುಗಡೆಯಾದ ಸಿನಿಮಾಗಳಿಗೆ ಇಂದು ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕನ್ನಡದ ಕೆಜಿಎಫ್-2 ಚಿತ್ರಕ್ಕೆ ಎರಡು ಪ್ರಶಸ್ತಿ ಒಲಿದು ಬಂದಿದೆ. ಕೆಜಿಎಫ್-2 ಸಿನಿಮಾಗೆ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ ಸಾಹಸ ವಿಭಾಗದಲ್ಲೂ ಕೆಜಿಎಫ್-2 ಚಿತ್ರಕ್ಕೆ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ.
ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿಗೆ ಅತ್ತುತ್ತಮ ನಟ ಪ್ರಶಸ್ತಿ ಘೋಷಣೆಯಾಗಿದೆ. ಜನಮೆಚ್ಚುಗೆ ಗಳಿಸಿದ್ದ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅಭಿನಯ ಅಮೋಘವಾಗಿತ್ತು. ಅತ್ಯುತ್ತಮ ನಟ ಜೊತೆಗೆ ಅತ್ಯುತ್ತಮ ಮನೋರಂಜನಾ ಪ್ರಶಸ್ತಿಗೆ ಕಾಂತಾರ ಸಿನಿಮಾ ಆಯ್ಕೆಯಾಗಿದೆ. ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ, ಕೇವಲ 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ, ಬರೋಬ್ಬರಿ 400 ಪ್ಲಸ್ ಕೋಟಿ ಗಳಿಕೆ ಕಂಡಿತ್ತು. 2022ರ ಸೆಪ್ಟೆಂಬರ್ 22ರಂದು ಕನ್ನಡದಲ್ಲಿ ಮಾತ್ರ ತೆರೆಕಂಡಿದ್ದ ಈ ಸಿನಿಮಾ, ಅದಾದ ಬಳಿಕ ಬೇರೆ ಭಾಷೆಗಳಿಗೂ ಡಬ್ ಆಗಿ ಮೋಡಿ ಮಾಡಿತ್ತು. ಇದೀಗ ಇದೇ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಗರಿ ಮುಡಿಗೇರಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮೈ ನವಿರೇಳಿಸುವಂತೆ ನಟಿಸಿದ್ದರು.
ಸ್ಯಾಂಡಲ್‌ವುಡ್‌ಗೆ ಈ ಮೂಲಕ ವರಮಹಾಲಕ್ಷ್ಮಿ ಹಬ್ಬದ್ದಂದೇ ಎರಡು ಖುಷಿಯ ಸುದ್ದಿಗಳು ಬಂದಿವೆ. ಅಕ್ಟೋಬರ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಇದನ್ನೂ ಓದಿ : ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಗರಿಗರಿ ನೋಟುಗಳಿಂದ ಬನಶಂಕರಿ ದೇವಿಗೆ ವಿಶೇಷ ಅಲಂಕಾರ..!