ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ 3 ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನುಡಿಜಾತ್ರೆಗೆ ಇಂದು ಅದ್ಧೂರಿ ಚಾಲನೆ ಸಿಗಲಿದ್ದು, ಸಕ್ಕರೆ ನಾಡು ಮಂಡ್ಯ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಬರೋಬ್ಬರಿ ಮೂರು ದಶಕಗಳ ಬಳಿಕ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಹೀಗಾಗಿ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಂಡ್ಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗ ಸಮ್ಮೇಳನ ನಡೆಯುತ್ತಿದ್ದು, 80 ಎಕರೆ ಪ್ರದೇಶದಲ್ಲಿ ಮೂರು ವಿವಿಧ ವೇದಿಕೆಗಳ ನಿರ್ಮಾಣ ಮಾಡಲಾಗಿದೆ. ಕೆಆರ್ಎಸ್ ಡ್ಯಾಂ ಮಾದರಿಯಲ್ಲಿ ಪ್ರಧಾನ ವೇದಿಕೆ ನಿರ್ಮಿಸಲಾಗಿದ್ದು, ವೇದಿಕೆ ಸೇರಿ ಪ್ರೇಕ್ಷಕರ ಗ್ಯಾಲರಿ ಕನ್ನಡ ಬಾವುಟಗಳಿಂದ ರಾರಾಜಿಸುತ್ತಿದೆ.
ಕನ್ನಡ ಸಾಹಿತ್ಯ ಹಬ್ಬಕ್ಕೆ ಬರುವವರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಉಪಹಾರ ಮತ್ತು ಊಟಕ್ಕಾಗಿ ಸುಮಾರು 140 ಕೌಂಟರ್ಗಳ ವ್ಯವಸ್ಥೆ ಮಾಡಲಾಗಿದ್ದು, ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಒಂದೇ ಮೆನು ಸಿದ್ಧಪಡಿಸಲಾಗಿದೆ. ಈ ಬಾರಿ ಮಂಡ್ಯ ಶೈಲಿಯಲ್ಲೇ ಊಟದ ವ್ಯವಸ್ಥೆ ಇರಲಿದ್ದು, ನೂರಾರು ಬಾಣಸಿಗರಿಂದ ಹೋಳಿಗೆ, ಮೈಸೂರ್ ಪಾಕ್, ಲಾಡು ಸೇರಿದಂತೆ ಹಲವು ಸಿಹಿ ತಿನಿಸುಗಳನ್ನ ತಯಾರಿಸುತ್ತಿದ್ದಾರೆ.
ಇಂದು ಬೆಳಗ್ಗೆ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಪ್ರಾರಂಭವಾಗಲಿದ್ದು, ಸುಮಾರು 300ಕ್ಕೂ ಹೆಚ್ಚು ಕಲಾ ತಂಡಗಳು ಮೆರೆವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಬೆಳಗ್ಗೆ 10.30ರ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬಳಿಕ ಮೂರು ವೇದಿಕೆಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಇಂದಿನಿಂದ 3 ದಿನ ಸಕ್ಕರೆ ನಾಡು ಮಂಡ್ಯ ಕನ್ನಡದ ಕಂಪು ಹರಿಸಲು ಸಜ್ಜಾಗಿದ್ದು, ನೀವು ಕೂಡ ಸಾಹಿತ್ಯಾಸಕ್ತರಾಗಿದ್ರೆ ಈಗಲೇ ಮಂಡ್ಯ ಕಡೆ ಹೆಜ್ಜೆ ಹಾಕಿ. ಸಕ್ಕರೆ ನಾಡಲ್ಲಿ ಕನ್ನಡದ ಕಹಳೆ ಮೊಳಗಿಸಲು ಕೈ ಜೋಡಿಸಿ.
ಇದನ್ನೂ ಓದಿ : ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ – ಮಧ್ಯರಾತ್ರಿ ನಡುರಸ್ತೆಯಲ್ಲಿ ಕುಳಿತು ಸಿ.ಟಿ ರವಿ ಪ್ರತಿಭಟನೆ..!