ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಅಕ್ರಮ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮುಡಾ ಸಭೆ ನಡೆಸಿದ್ದು, ಈ ಸಭೆಯಲ್ಲಿ 50:50 ನಿವೇಶನಗಳನ್ನು ರದ್ದು ಮಾಡಲು ಒಮ್ಮತದ ನಿರ್ಣಯ ಕೈಗೊಂಡಿದೆ.
ಮುಡಾ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಮುಡಾ ಸಭೆಯಲ್ಲಿ 50-50 ಅನುಪಾತದಲ್ಲಿ ಹಂಚಿಕೆಯಾದ ಸೈಟಗಳ ಜಪ್ತಿಗೆ ಸದಸ್ಯರು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ. ನ್ಯಾಯಮೂರ್ತಿ ಪಿ.ಎನ್ ದೇಸಾಯಿ ವರದಿ ನಂತರ ಜಪ್ತಿಯ ವರದಿ ಅಂಗಕರಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಅಕ್ರಮವಾಗಿ 50:50 ಸೈಟ್ ಪಡೆದವರಿಗೆ ಸಂಕಷ್ಟ ಎದುರಾಗಿದೆ.
ಮುಡಾದಲ್ಲಿ 2021ರಿಂದ 2024ರ ಜೂನ್ವರೆಗೆ 50:50/ಬದಲಿ ನಿವೇಶನ ಸ್ಕೀಂನಡಿ 4,839 ನಿವೇಶನಗಳನ್ನು ಹಂಚಲಾಗಿದೆ ಎಂದು ಹೇಳಲಾಗುತ್ತಿದೆ. ಕೆಲವರ ಪ್ರಕಾರ 2020ರಿಂದಲೇ ಈ ಸ್ಕೀಂನಡಿ ನಿವೇಶನ ಹಂಚಿಕೆ ಶುರುವಾಗಿದೆ. ಒಂದು ವೇಳೆ 2020ರಿಂದಲೇ ಹಂಚಿಕೆಯಾದ ನಿವೇಶನಗಳನ್ನು ಪರಿಗಣಿಸಿದರೆ ಈವರೆಗೆ 50:50/ಬದಲಿ ನಿವೇಶನ ಯೋಜನೆಯಡಿ ಹಂಚಿಕೆಯಾದ ಸೈಟುಗಳ ಸಂಖ್ಯೆ 5 ಸಾವಿರ ದಾಟಲಿದೆ ಎನ್ನಲಾಗಿದೆ. ಈ ಎಲ್ಲಾ ನಿವೇಶನಗಳು ರದ್ದಾಗುವ ಸಾಧ್ಯತೆಯಿದೆ.
ನಿನ್ನೆಯ ಸಭೆಯಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ದರ್ಶನ್ ಧ್ರುವನಾರಾಯಣ್, ಹರೀಶ್ ಗೌಡ, ಮಧು ಮಾದೇಗೌಡ, ರಮೇಶ್ ಬಂಡಿಸಿದ್ದೇಗೌಡ, ಶ್ರೀವತ್ಸ, ಎಚ್. ವಿಶ್ವನಾಥ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿದಂತೆ ಆಹ್ವಾನಿತ ಶಾಸಕರು ಹಾಜರಿದ್ದರು.
ಇದನ್ನೂ ಓದಿ : ಇನ್ನೂ ಮೂರುವರೆ ವರ್ಷ ನಾನೇ ಮುಖ್ಯಮಂತ್ರಿ – ವಿರೋಧಿಗಳಿಗೆ ಸಿದ್ದು ಕೌಂಟರ್..!