ಭಾರತೀಯರ ಸೇವಾ ಸಮಿತಿ ಸ್ಥಾಪಕರಾದ ಎಂ ರಾಮಚಂದ್ರ (ಹೂಡಿ ಚಿನ್ನಿ) ಅವರು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಮನೆಮಾತಾಗಿರುವವರು. ಜನಪರ ಕೆಲಸಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಇವರು ಈಗ ಗಾಯಕರಾಗೂ ಜನಪ್ರಿಯ. ಇದೀಗ ಹೆಸರಾಂತ ಸಾಹಿತಿ ಮಂಜುಕವಿ ಬರೆದು, ಹೂಡಿ ಚಿನ್ನಿ ಅವರು ಹಾಡಿರುವ “ಜಾತಿ ಧರ್ಮದ ಜಂಜಾಟದಲ್ಲಿ ನಿನ್ನ ಬಾಳು ಕತ್ತಲು” ಎಂಬ ಗೀತೆ ಎಂ.ಕೆ ಆಡಿಯೋದಲ್ಲಿ ಬಿಡುಗಡೆಯಾಗಿದೆ.
‘ಜಾತಿ ಧರ್ಮದ ಜಂಜಾಟದಲ್ಲಿ ನಿನ್ನ ಬಾಳು ಕತ್ತಲು’ ಎಂಬ ಅರ್ಥಗರ್ಭಿತ, ಎಲ್ಲರ ಮನಸ್ಸಿಗೂ ಹತ್ತಿರವಾಗುವ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹಿಂದು, ಮುಸ್ಲಿಂ, ಕ್ರೈಸ್ತ ಹಾಗೂ ಬೌದ್ಧ ಧರ್ಮದ ಗುರುಗಳು ಭಾವೈಕ್ಯತೆ ಸಾರುವ ಈ ಹಾಡನ್ನು ಲೋಕಾರ್ಪಣೆ ಮಾಡಿದರು. ಸಾಲುಮರದ ತಿಮ್ಮಕ್ಕ ಅವರ ಪುತ್ರ ಉಮೇಶ್, ಗಾಯಕ ಮಳವಳ್ಳಿ ಮಹದೇವಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಹಾಡು ಬಿಡುಗಡೆಯ ಬಳಿಕ ಮಾತನಾಡಿದ ಹೂಡಿ ಚಿನ್ನಿ ಅವರು, ಭಾರತ ಭಾವೈಕ್ಯತೆಯ ರಾಷ್ಟ್ರ. ಇಲ್ಲಿ ವಾಸಿಸುವ ನಾವೆಲ್ಲರೂ ಅಣ್ಣ ತಮ್ಮಂದಿರು. ಜಾತಿ, ಧರ್ಮ ಎಲ್ಲದಕ್ಕಿಂತ ಮಿಗಿಲು ಮಾನವೀಯತೆ. ಇಂತಹ ಉತ್ತಮ ವಿಷಯವನ್ನು ತಮ್ಮ ಅರ್ಥಗರ್ಭಿತ ಸಾಲುಗಳ ಮೂಲಕ ಮಂಜುಕವಿ ಉತ್ತಮ ಗೀತೆಯನ್ನು ಬರೆದಿದ್ದಾರೆ. ಅವರು ಬರೆದಿರುವ ಹಾಡನ್ನು ನನ್ನಿಂದಲ್ಲೇ ಹಾಡಿಸಿದ್ದಾರೆ. ಹಾಡು ಚೆನ್ನಾಗಿ ಮೂಡಿಬಂದಿದೆ. ನಮ್ಮ ಬಳಿ ಎಷ್ಟು ದುಡ್ಡು ಇದ್ದರೂ, ನಾವು ಹೋಗಬೇಕಾದರೆ ಏನು ತೆಗೆದುಕೊಂಡು ಹೋಗುವುದಿಲ್ಲ. ಹಾಗಾಗಿ ಬದುಕಿದ್ದಾಗ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣ ಬೆಳಸಿಕೊಳ್ಳಬೇಕು. ಈ ಕುರಿತು ಕೂಡ ಮಂಜು ಕವಿ “ಕೋಟಿ ಕೋಟಿ ರೊಕ್ಕ ಗಳಿಸಿ” ಎಂಬ ಹಾಡನ್ನು ಬರೆದಿದ್ದರು. ಆ ಹಾಡನ್ನು ನನ್ನಿಂದ ಹಾಡಿಸಿ ನನ್ನನ್ನು ಗಾಯಕನನ್ನಾಗಿ ಮಾಡಿದ್ದರು. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಹೇಳಿದರು.
ಹಾಡು ಬರೆದಿರುವ ಮಂಜುಕವಿ ಮಾತನಾಡಿ, ಯಾರಿಗಾದರೂ ತುರ್ತಾಗಿ ರಕ್ತ ಬೇಕಿದ್ದಾಗ, ರಕ್ತದ ಅವಶ್ಯಕತೆ ಇರುತ್ತದೆ ಹೊರತು ಅಲ್ಲಿ ಜಾತಿ ಮುಖ್ಯವಾಗಿರುವುದಿಲ್ಲ. ಇಲ್ಲಿ ನಾವೆಲ್ಲಾ ಸಮಾನರು ಎಂಬ ಸಾಮಾಜಿಕ ಕಳಕಳಿಯ ಅಂಶಗಳನ್ನಿಟ್ಟಿಕೊಂಡು ಈ ಹಾಡನ್ನು ಬರೆದಿದ್ದೇನೆ. ಹೂಡಿ ಚಿನ್ನಿ ಅವರ ಗಾಯನ, ವಿನು ಮನಸು ಅವರ ವಾದ್ಯ ಸಂಯೋಜನೆ ಹಾಗೂ ವೆಂಕಿ ಯುಡಿವಿ ಅವರ ಸಂಕಲನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಸಮಾರಂಭಕ್ಕೆ ಬಿಎಸ್ಎಸ್ನ ರಾಜ್ಯ ಅಧ್ಯಕ್ಷರು ವಿ ಅಮರ್, ಮುನಿ ಮಾರಪ್ಪ ಮೂಲ ನಿವಾಸಿ ಅಂಬೇಡ್ಕರ್ ಸಂಘದ ರಾಜ್ಯಾಧ್ಯಕ್ಷರು ರಾಜ್ಯ ಉಪಾಧ್ಯಕ್ಷರು ಅಂಜನಪ್ಪ ಯಾದವ್, ಮೂಲ ನಿವಾಸಿ ಅಂಬೇಡ್ಕರ್ ಸಂಘದ ಅಧ್ಯಕ್ಷರು ಮುನಿರಾಜುರವರು, ಶ್ರೀಮತಿ ಭಾಗ್ಯರವರು ಮೂಲ ನಿವಾಸಿ ಅಂಬೇಡ್ಕರ್ ಸಂಘದ ಅಧ್ಯಕ್ಷರು ಹಾಜರಿದ್ದು ಕರ್ಣಾಟಕ ರಕ್ಷಣಾ ವೇದಿಕೆ ಮೋಹನ್ ಗೌಡ ಕೆ.ಪ್ರಭಾಕರ್ ಗೌಡ ನಾರಾಯಣಸ್ವಾಮಿ ಚಿಕ್ಕಬಳ್ಳಾಪುರ ಮಹಿಳಾ ಒಕ್ಕೂಟದ ಯಶೋದಮ್ಮ ಪರಿಮಳ ಬೀದಿ ಬದಿ ವ್ಯಾಪಾರಿ ಅಧ್ಯಕ್ಷರು ಮುನಿರಾಜ್, ಚಿಂತಾಮಣಿ ಕೃಷ್ಣಪ್ಪನವರು, ಆಟೋ ಘಟಕ ಅಧ್ಯಕ್ಷರು ಶ್ರೀನಿವಾಸ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೆಂಗಳೂರಲ್ಲಿ ವಾಗೀಶ್ವರಿ ಪೂಜೆ ಮತ್ತು ಲೇಖನ ಸಂಕಲ್ಪ – ಕೆ. ಪ್ರಕಾಶ್ ಶೆಟ್ಟಿ..!