ದೆಹಲಿ : ಗೌತಮ್ ಅದಾನಿ ಸೇರಿದಂತೆ ಹಲವು ಕಾರ್ಪೋರೇಟ್ ದೈತ್ಯರ ಅಕ್ರಮಗಳನ್ನು ಬಯಲಿಗೆ ಎಳೆದಿದ್ದ ಅಮೆರಿಕಾದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆ ತನ್ನ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. 2017ರಲ್ಲಿ ನಾಥನ್ ಆ್ಯಂಡರ್ಸನ್ ಸ್ಥಾಪನೆ ಮಾಡಿದ್ದ ಹಿಂಡನ್‌ಬರ್ಗ್ ತನ್ನ ವರದಿಯ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿತ್ತು. ಇದೀಗ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿದೇವೆ ಎಂದು ಹಿಂಡನ್‌ಬರ್ಗ್ ಘೋಷಣೆ ಮಾಡಿದೆ.
ಹಿಂಡನ್‌ಬರ್ಗ್ ಸಂಸ್ಥೆಯನ್ನು ಮುಚ್ಚುವ ಕುರಿತು ತಮ್ಮ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿರುವ ಸಂಸ್ಥಾಪಕ ನಾಥನ್ ಆ್ಯಂಡರ್ಸನ್, ಜಗತ್ತಿನಲ್ಲಿ ಅನೇಕ ವಿಚಾರಗಳನ್ನು ಹಾಗೂ ನಾನು ಕಾಳಜಿ ವಹಿಸುವ ವ್ಯಕ್ತಿಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ನಿರ್ಧಾರ ತೆಗೆದುಕೊಳ್ಳಲು 2024ರ ಅಂತ್ಯದಿಂದಲೆ ನನ್ನ ಕುಟುಂಬ ಮತ್ತು ತಂಡದೊಂದಿಗೆ ಚರ್ಚಿಸಿದ್ದೇನೆ. ಈ ಕುರಿತು ಅಂತಿಮ ವಿಚಾರಗಳು ಪೂರ್ಣಗೊಂಡಿದ್ದು, ನಿಯಮಾವಳಿಗಳಂತೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಮ್ಮ ತಂಡದಲ್ಲಿರುವ ಪ್ರತಿಯೊಬ್ಬರು ಮುಂದೆ ತಮ್ಮಿಷ್ಟದಂತೆ ಎಲ್ಲಿರಬೇಕು ಎಂದು ನಿರ್ಧರಿಸುತ್ತಾರೆಯೋ ಅದಕ್ಕೆ ಸಹಕಾರ ನೀಡಿ ಗಮನ ಹರಿಸಲಾಗುವುದು. ಕೆಲವರು ತಮ್ಮದೇ ಸ್ವಂತ ಸಂಶೋಧನಾ ಘಟನೆ ಸ್ಥಾಪಿಸಬೇಕು ಎಂದಿದ್ದಾರೆ. ಇದರಲ್ಲಿ ನಾನು ವೈಯಕ್ತಿಕವಾಗಿ ತೊಡಗಿಕೊಳ್ಳದಿದ್ದರೂ ದೃಢವಾಗಿ ಮತ್ತು ಸಾರ್ವಜನಿಕವಾಗಿ ಅವರಿಗೆ ಪ್ರೋತ್ಸಾಹ ನೀಡುತ್ತೇನೆ. ಮತ್ತೆ ಕೆಲವರು ಸ್ವತಂತ್ರ ಏಜೆಂಟ್ ಆಗಿ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ. ಅವರು ಅಗತ್ಯವಿದ್ದಲ್ಲಿ ಮುಕ್ತವಾಗಿ ನನ್ನನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಅದಾನಿ ಸಾಮ್ರಾಜ್ಯವನ್ನೇ ನಡುಗಿಸಿದ್ದ ಹಿಂಡನ್‌ಬರ್ಗ್ : ಅದಾನಿ ಗ್ರೂಪ್ ತನ್ನ ಕಂಪನಿಯ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಲು ಬಳಸಿದ ಮಾರಿಷಸ್ ನಿಧಿಯಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಪಾಲು ಹೊಂದಿದ್ದಾರೆ ಎಂದು ಹಿಂಡನ್‌ಬರ್ಗ್ 2024ರಲ್ಲಿ ಆರೋಪ ಮಾಡಿತ್ತು. ಇದು ಷೇರುಪೇಟೆಯಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಇದರಿಂದಾಗಿ ಅದಾನಿ ಗ್ರೂಪ್ ಷೇರುಗಳಲ್ಲಿ ಭಾರೀ ಕುಸಿತ ಉಂಟಾಗಿತ್ತು. ಇನ್ನು ಹಿಂಡನ್‌ಬರ್ಗ್ ರಿಸರ್ಚ್ ಮುಚ್ಚುತ್ತಿರುವುದಾಗಿ ಘೋಷಣೆಯಾದ ಬಳಿಕ ಅದಾನಿ ಗ್ರೂಪ್ನ ಬಹುತೇಕ ಎಲ್ಲಾ ಸ್ಟಾಕ್‌ಗಳು ಶೇಕಡಾ 8ರವರೆಗೆ ಏರಿಕೆ ಸಾಧಿಸಿವೆ.
ಇದನ್ನೂ ಓದಿ : ಬಹುನಿರೀಕ್ಷಿತ ‘ಹೈನ’ ಸಿನಿಮಾದ ಟ್ರೈಲರ್ ರಿಲೀಸ್.. ಚಿತ್ರತಂಡಕ್ಕೆ ಶುಭ ಹಾರೈಸಿದ ಸಂಸದ ತೇಜಸ್ವಿ ಸೂರ್ಯ!