ಮುಂಬೈ : ಮುಂಬೈನಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಬುಧವಾರ ಸಂಜೆ ಹೊತ್ತಿನಲ್ಲಿ ಧಾರಾಕಾರ ಮಳೆ ಶುರುವಾಗಿದ್ದು, 5 ಗಂಟೆಗಳ ಅವಧಿಯಲ್ಲಿ ಮುಂಬೈ ಮಹಾನಗರ ಪ್ರದೇಶದ ಕೆಲವು ಭಾಗಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಮಳೆ ಸುರಿದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರೈಲು ಹಳಿಗಳ ಮೇಲೆಲ್ಲಾ ನೀರು ನಿಂತು ಲೋಕಲ್ ಟ್ರೈನ್ಗಳ ಸಂಚಾರ ಬಂದ್ ಆಗಿದೆ. ಬಲವಾದ ಗಾಳಿಯಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿ 14 ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ.
ಧಾರಾಕಾರ ಮಳೆಯಿಂದಾಗಿ ಅಂಧೇರಿಯಲ್ಲಿ 45 ವರ್ಷದ ಮಹಿಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಐದು ಗಂಟೆಗಳಷ್ಟು ಕಾಲ ಸತತವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳು ನದಿಗಳಂತಾಗಿದ್ದು, ಹಲವು ಪ್ರದೇಶದಲ್ಲಿ 100 ಮಿಲಿಮೀಟರ್ ಮಳೆಯಾಗಿದೆ. ಹವಾಮಾನ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಇಂದು ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಸದ್ಯ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪುಣೆ ಭೇಟಿ ಕೂಡ ರದ್ದುಗೊಂಡಿದೆ. ಪುಣೆಯಲ್ಲಿ ನಿರ್ಮಾಣವಾಗಿರುವ ಮೆಟ್ರೋ ಮಾರ್ಗದ ಉದ್ಘಾಟನೆಗೆ ಪ್ರಧಾನಿ ಬರಬೇಕಿತ್ತು. ಭಾರೀ ಮಳೆ ಹಿನ್ನೆಯಲ್ಲಿ ಮುಂಬೈಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಮುಂಬೈ ಮತ್ತು ನೆರೆಯ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ. ಇನ್ನು ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂಬೈ, ಥಾಣೆ, ರಾಯಗಢ ಮತ್ತು ರತ್ನಗಿರಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಪುಣೆಯ ಶಿವಾಜಿನಗರದಲ್ಲಿ ಮಂಗಳವಾರ ಸಂಜೆ 5:30ರವರೆಗೂ 19.2 ಮಿಮಿ. ಮಳೆ ದಾಖಲಾಗಿತ್ತು. ಇದರಿಂದಾಗಿ ಭಾರತೀಯ ಹವಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿ, ಮುಂದಿನ 24 ಗಂಟೆಗಳಲ್ಲಿ ತ್ರೀವ ಮಳೆಯಾಗುವ ಸಾಧ್ಯತೆಯಿದೆ ಎಂದು ಮೂನ್ಸೂಚನೆ ನೀಡಿತ್ತು. ಬಳಿಕ ಮಳೆಯ ತೀವ್ರತೆಯಿಂದಾಗಿ ಸೆ.25 ರಂದು ರೆಡ್ ಅಲರ್ಟ್ ಘೋಷಣೆ ಮಾಡಿತ್ತು.
ಇದನ್ನೂ ಓದಿ : ಈ ಬಾರಿ ಬಿಗ್ ಬಾಸ್ನಲ್ಲಿ ಒಂದಲ್ಲ, ಎರಡು ಮನೆ – ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ ಆ ಹೇಳಿಕೆ..!