ಬಾಗಲಕೋಟೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಮೇಲೆ ಮಂಗಳವಾರ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಕರ್ತವ್ಯಕ್ಕೆ ಸೇರಿಸಿಕೊಳ್ಳಲು ₹5 ಸಾವಿರ ಲಂಚ ಪಡೆಯುತ್ತಿದ್ದ ಸಹಾಯಕ ಆಡಳಿತ ಅಧಿಕಾರಿ ರಾಜಶ್ರೀ ಪೋಳ ಅವರನ್ನು ವಶಕ್ಕೆ ಪಡೆದಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರರಾಗಿರುವ ರಾಘವೇಂದ್ರ ಮಡಿವಾಳ ಅನಧಿಕೃತವಾಗಿ ಗೈರು ಆಗಿದ್ದರು. ನಂತರ ಮರಳಿ ಕರ್ತವ್ಯಕ್ಕೆ ಹಾಜರಾಗಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಆಗ ಅವರಿಗೆ ಅನುಮತಿ ಸಿಕ್ಕಿತ್ತು.
ಬಳಿಕ ಕರ್ತವ್ಯಕ್ಕೆ ಹಾಜರಾಗಲು ಹೋದಾಗ ಸೇರಿಸಿಕೊಳ್ಳಲು ರಾಜಶ್ರೀ ಅವರು ₹5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರಾಘವೇಂದ್ರ ನೀಡಿದ ದೂರಿನ ಮೇರೆಗೆ ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿ ಮೇಲೆ ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ವರ ನೇತೃತ್ವದ ತಂಡ ದಾಳಿ ನಡೆಸಿ ರಾಜಶ್ರೀ ಪೋಳ ಅವರನ್ನು ವಶಕ್ಕೆ ಪಡೆದಿದೆ.
ಇದನ್ನೂ ಓದಿ : ಚಿಕ್ಕೋಡಿಯಲ್ಲಿ ಹೃದಯವಿದ್ರಾವಕ ಘಟನೆ.. ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ..!