ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ದೇಗುಲದ ಪವಿತ್ರ ಲಡ್ಡು ಪ್ರಸಾದ ಅಪವಿತ್ರದ ವಿದ್ಯಮಾನ ಬರೀ ಆಂಧ್ರ ಪ್ರದೇಶಕ್ಕೆ ಸೀಮಿತವಾಗದೇ ಇಡೀ ದೇಶದಲ್ಲಿ ಬಹು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಹಿಂದಿನ ಜಗನ್ ಸರ್ಕಾರದ ವಿರುದ್ದ ದೇಶಾದ್ಯಂತ ಭಾರೀ ಆಕ್ರೋಶ ಕೂಗು ಕೇಳಿಬರುತ್ತಿದೆ.
ಒಂದೆಡೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್, ಈ ವಿದ್ಯಮಾನವನ್ನು ಮುಂದಿಟ್ಟುಕೊಂಡು ಹನ್ನೊಂದು ದಿನ ಪ್ರಾಯಶ್ಚಿತ್ತ ದೀಕ್ಷೆಯನ್ನು ಆರಂಭಿಸಿದ್ದಾರೆ. ಇನ್ನೊಂದೆಡೆ ಆಂಧ್ರಪ್ರದೇಶ ಸರ್ಕಾರ ದೇಗುಲದ ಶುದ್ಧೀಕರಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ತಿಮ್ಮಪ್ಪನ ಸನ್ನಿಧಾನದಲ್ಲಿ ಮಹಾ ಶುದ್ಧೀಕರಣ ಕಾರ್ಯ ಕೈಗೊಂಡಿದೆ.
ತಿರುಪತಿ ದೇಗುಲದಲ್ಲಿ ಶಾಂತಿ ಹೋಮದ ಜೊತೆಗೆ ಮಹಾ ಸಂಪ್ರೋಕ್ಷಣೆ ನಡೆಯುತ್ತಿದ್ದು, ವೈದಿಕರು, ತಿರುಪತಿ ತಿರುಮಲದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಚಿನ್ನದ ಬಾವಿ(ಬಂಗಾರು ಬಾವಿ) ಬಳಿಯ ಯಾಗ ಶಾಲೆಯಲ್ಲಿ ಹೋಮ ಹವನ ಮಾಡುತ್ತಿದ್ದಾರೆ. ಮಹಾ ಸಂಪ್ರೋಕ್ಷಣೆ ಹೆಸರಿನಲ್ಲಿ ಶುದ್ಧೀಕರಣ ಕಾರ್ಯ ಮಾಡಲಾಗುತ್ತಿದ್ದು, ಆಗಮಿಕರು ಪಂಚಗವ್ಯಗಳನ್ನು ಬಳಸಿ ಶುದ್ಧೀಕರಣ ಮಾಡ್ತಿದ್ದಾರೆ.
ಇದನ್ನೂ ಓದಿ : ತಿರುಪತಿ ಲಡ್ಡು ವಿವಾದ – ತನಿಖೆಗೆ ಎಸ್ಐಟಿ ರಚಿಸಿದ ಆಂಧ್ರ ಸರ್ಕಾರ..!
ಈ ನಡುವೆ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾದ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ. ಹೌದು.. ಖಮ್ಮಂ ಜಿಲ್ಲೆಯ ಗ್ರಾಮಾಂತರ ಮಂಡಲ ವ್ಯಾಪ್ತಿಯ ಗೊಲ್ಲಗುಡೆಂ ಪಂಚಾಯತ್ ಕಾರ್ತಿಕೇಯ ಟೌನ್ಶಿಪ್ನ ನಿವಾಸಿ ದೊಂತು ಪದ್ಮಾವತಿ ಅವರು ಸೆಪ್ಟೆಂಬರ್ 19 ರಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹಿಂತಿರುಗುವಾಗ ತನ್ನ ಸಂಬಂಧಿಕರು ಮತ್ತು ನೆರೆಹೊರೆಯವರೊಂದಿಗೆ ಹಂಚಿಕೊಳ್ಳಲು ಶ್ರೀವಾರಿ ಲಡ್ಡು ಪ್ರಸಾದವನ್ನು ತಂದಿದ್ದರು. ಭಾನುವಾರ (ಸೆಪ್ಟೆಂಬರ್ 22) ಪ್ರಸಾದ ಹಂಚಲು ಲಡ್ಡು ತೆಗೆದು ನೋಡಿದಾಗ ಅದರಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾಗಿದೆ.
ಅತ್ಯಂತ ಪವಿತ್ರವಾದ ಲಡ್ಡು ಪ್ರಸಾದದಲ್ಲಿ ಪದ್ಮಾವತಿಗೆ ಗುಟ್ಕಾ ಪ್ಯಾಕೆಟ್ ಕಂಡು ಆಶ್ಚರ್ಯವಾಗಿದೆ. ಈ ವಿಷಯವನ್ನು ತಮ್ಮ ಕುಟುಂಬಸ್ಥರಿಗೆ ತಿಳಿಸಿ, ಆ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಚಾರವೂ ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶದ ಕೂಗು ಕೇಳಿಬರುತ್ತಿದೆ. ಇನ್ನು ಹೀಗೆ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಸಿಕ್ಕಿರುವುದು ಇದೇ ಮೊದಲಲ್ಲ. 2012ರಲ್ಲೂ ಒಮ್ಮೆ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಕಾಣಿಸಿಕೊಂಡಿತ್ತು.
ಇದನ್ನೂ ಓದಿ : ಕೊಬ್ಬಿನ ಲಡ್ಡುವಿನಿಂದ ಅಪವಿತ್ರ – ಶುರುವಾಯ್ತು ತಿಮ್ಮಪ್ಪನ ಸನ್ನಿಧಾನದಲ್ಲಿ ಮಹಾ ಶುದ್ಧೀಕರಣ ಕಾರ್ಯ..!