ಖ್ಯಾತ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈಗ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿಕೊಟ್ಟಿದ್ದಾರೆ. ಅದು ‘ಗನ್ಸ್ ಅಂಡ್ ರೋಸಸ್’ ಎಂಬ ಚಿತ್ರದ ಮೂಲಕ. ಸಿನಿಮಾ ಪಾಲಿಗೆ ಎಂದೂ ಹಳತಾಗದ ಕಥಾ ವಸ್ತುಗಳಲ್ಲಿ ಭೂಗತ ಜಗತ್ತೂ ಸೇರಿಕೊಂಡಿದೆ. ಆಯಾ ನಿರ್ದೇಶಕರ ಹೊಸತನದ ದೃಷ್ಟಿಗೆ ಈ ಲೋಕದ ಕಥಾ ಎಳೆಗಳು ತಾಜಾತನದಿಂದ ದಕ್ಕೋದಿದೆ. ಇದೀಗ ಪ್ರೇಕ್ಷಕರ ಗಮನ ಸೆಳೆದುಕೊಂಡಿರುವ `ಗನ್ಸ್ ಅಂಡ್ ರೋಸಸ್’ ಚಿತ್ರ ಟೀಸರ್ನಲ್ಲಿಯೂ ಅಂಥಾದ್ದೇ ಕಥನದ ಸುಳಿವು ದೊರೆತಿದೆ.
ಚಿತ್ರದ ಟೀಸರ್ನಲ್ಲಿರುವ, ದೃಶ್ಯಗಳಲ್ಲಿರೋ ಆವೇಗ, ಶ್ರೀಮಂತಿಕೆ, ಹೊಸತನಗಳು ಪ್ರೇಕ್ಷಕರ ನಡುವಲ್ಲೊಂದು ಚರ್ಚೆ ಹುಟ್ಟು ಹಾಕಿದೆ. ವಿಶೇಷವೆಂದರೆ , ಇದು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ತಯಾರಾಗಿರುವ ಚಿತ್ರವಾಗಿದೆ. ಐದು ಭಾಷೆಗಳಲ್ಲಿ ತಯಾರುಗೊಂಡಿರುವ ಈ ಚಿತ್ರ ಇದೇ ಡಿಸೆಂಬರ್ 27ರಂದು ಬಿಡುಗಡೆಗೊಳ್ಳಲಿದೆ.
ಈ ಚಿತ್ರದಲ್ಲಿ ನಾಯಕ ಅರ್ಜುನ್ ಪಕ್ಕಾ ಮಾಸ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಈಗಾಗಲೇ ಬೇರೆ ಬೇರೆ ಭಾಷೆಗಳ ವಿತರಕರು ಚಿತ್ರವನ್ನು ವೀಕ್ಷಿಸಿದ್ದಾರೆ. ಅವರೆಲ್ಲರೂ ಅರ್ಜುನ್ ನಟನೆಯ ಕಸುವನ್ನು ಕಂಡು ಅಕ್ಷರಶಃ ಬೆರಗಾಗಿದ್ದಾರೆ. ಎಲ್ಲ ಭಾಷೆಗಳಿಗೂ ಹೊಂದಿಕೊಳ್ಳುವಂಥಾ ಅರ್ಜುನ್ ಅವರ ಛಾತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟನೆ, ಸಾಹಸ ಸನ್ನಿವೇಶ, ಡ್ಯಾನ್ಸ್ ಸೇರಿದಂತೆ ಎಲ್ಲದರಲ್ಲಿಯೂ ಅವರು ಪಳಗಿದ ನಟನಂತೆ ಕಾಣಿಸಿಕೊಂಡಿದ್ದಾರೆ. ಹೀಗೊಂದು ಮೆಚ್ಚುಗೆ ಪರಭಾಷಾ ಚಿತ್ರರಂಗದ ಮಂದಿಯಿಂದಲೇ ಕೇಳಿ ಬಂದಿದೆ ಎಂದರೆ, ಈ ಸಿನಿಮಾದ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿಕೊಳ್ಳುತ್ತದೆ.
ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಎಚ್.ಆರ್ ನಟರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶನ ವಿಭಾಗದಲ್ಲಿ ಇಪ್ಪತೈದು ವರ್ಷಗಳಿಂದ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಸದರಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಪೋಲಿಸ್ ಸ್ಟೋರಿ ಚಿತ್ರದಿಂದ ನಿರ್ದೇಶನ ವಿಭಾಗದಲ್ಲಿ ಕಾರ್ಯಾರಂಭ ಮಾಡಿದ್ದ ಹೆಚ್.ಎಸ್ ಶ್ರೀನಿವಾಸ್ ಕುಮಾರ್, ಇದುವರೆಗೂ ನೂರಾರು ಸಿನಿಮಾಗಳ ಭಾಗವಾಗಿದ್ದಾರೆ. ಅಂಥಾ ಅನುಭವಗಳನ್ನೆಲ್ಲ ಒಟ್ಟುಗೂಡಿಸಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ.
ಇದು ಭೂಗತ ಜಗತ್ತಿನ ಕಥೆಯೊಂದಿಗೆ ಮೈಕೈ ತುಂಬಿಕೊಂಡಿರುವ ಕಥಾನಕ. ಅದರೊಂದಿಗೆ ನವಿರು ಪ್ರೇಮ ಕಥೆಯೂ ಸೇರಿಕೊಂಡಿದೆಯಂತೆ. ಇದುವರೆಗೂ ಕತ್ತಲ ಜಗತ್ತಿಗೆ ಕಣ್ಣಾದ ಅನೇಕ ಕಥೆಗಳು ಬಂದಿವೆ. ಆದರೆ, ಇಲ್ಲಿರೋದು ಭಿನ್ನ ಧಾಟಿಯ ಕಥೆ ಅನ್ನೋದು ಚಿತ್ರತಂಡದ ಮಾತು.
ಬೆಂಗಳೂರು ಸುತ್ತಮುತ್ತಲ ಸುಂದರ ಲೊಕೇಶನ್ಗಳಲ್ಲಿ ಈ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇದೀಗ ಎಲ್ಲ ಕೆಲಸ ಕಾರ್ಯ ಮುಗಿಸಿಕೊಂಡಿರೋ ಗನ್ಸ್ ಅಂಡ್ ರೋಸಸ್ ಬಿಡುಗಡೆಗೆ ತಯಾರಾಗಿ ನಿಂತಿದೆ. ಈಗಾಗಲೇ ಒಂದು ಲಿರಿಕಲ್ ವೀಡಿಯೋ ಸಾಂಗ್ ಅನ್ನು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಗೊಳಿಸಲಾಗಿದೆ. ಹಂತ ಹಂತವಾಗಿ ಮಿಕ್ಕುಳಿದ ಹಾಡುಗಳನ್ನು ಬಿಡುಗಡೆಗೊಳಿಸುವ ಆಲೋಚನೆಯಲ್ಲಿ ಚಿತ್ರತಂಡವಿದೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಅವಿನಾಶ್, ಕಿಶೋರ್ ಮುಂತಾದವರ ತಾರಾಗಣವಿದೆ.
ಇದನ್ನೂ ಓದಿ : ರೈತ ವಿರೋಧಿ ಧೋರಣೆ ಕಾಂಗ್ರೆಸ್ಗೆ ಶಾಪ ಆಗಲಿದೆ – ಸರ್ಕಾರದ ವಿರುದ್ಧ ಬಿ.ವೈ ವಿಜಯೇಂದ್ರ ಕಿಡಿ..!