ಶೃಂಗೇರಿ : ಶೃಂಗೇರಿಯ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನ ಸನ್ಯಾಸ ಸ್ವೀಕರಿಸಿದ ಸುವರ್ಣ ಮಹೋತ್ಸವ ಅಂಗವಾಗಿ ಬೃಹತ್ತಾದ ಲೋಕಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಗದ್ಗುರು ಶ್ರೀ ವಿಧು ಶೇಖರ ಭಾರತಿ ಸನ್ನಿಧಾನಂಗಳಲ್ಲಿ ಯಡತೊರೆಯ ಪೂಜ್ಯ ಶ್ರೀ ಶಂಕರ ಭಾರತಿ ಸ್ವಾಮಿಗಳು ನಿವೇದಿಸಿಕೊಂಡಾಗ ಅವರು ಸೂಚಿಸಿದ್ದ ಸ್ತೋತ್ರ ಪಠನವೇ ಕಲ್ಯಾಣ ವೃಷ್ಟಿ ಸ್ತವ. ಶಂಕರಭಗವತ್ಪಾದರ ರಚನೆಯಾದ ಕಲ್ಯಾಣ ವೃಷ್ಟಿಸ್ತವ ಜಗನ್ಮಾತೆಯನ್ನು ಸ್ತುತಿಸುವ ಹದಿನಾರು ಶ್ಲೋಕಗಳನ್ನೊಳಗೊಂಡ ಮಹಾಮಂತ್ರ.
ಬೆಂಗಳೂರಿನಲ್ಲಿ ಕಲ್ಯಾಣ ವೃಷ್ಟಿಸ್ತವ ಸ್ತೋತ್ರ ಸಮರ್ಪಣೆ ಒಂದು ಲಕ್ಷ ಎಂಬತ್ತು ಸಹಸ್ರ ಭಕ್ತರಿಂದ ಏಕ ಕಂಠದಲ್ಲಿ ಪಠಣವಾಗಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನದೆದುರು ಸಮರ್ಪಣೆ ಆಯಿತು. ಜಗದ್ಗುರು ಶ್ರೀ ಭಾರತೀತೀರ್ಥರು ಶೃಂಗೇರಿ ಬಿಟ್ಟು ಎಲ್ಲಿಗೂ ಬರಲಾರರಾದುದರಿಂದ ಅವರ ಸಮ್ಮುಖದಲ್ಲೇ ಸ್ತೋತ್ರ ಸಮರ್ಪಣೆ ಆಗಬೇಕು ಎಂಬ ಕಾರಣಕ್ಕೆ ಜನವರಿ 11ರಂದು ಶೃಂಗೇರಿಯ ನರಸಿಂಹ ವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದು ಶೃಂಗೇರಿಯ ಇತಿಹಾಸದಲ್ಲಿ ಬೃಹತ್ತಾದ ಮಹಾ ಕಾರ್ಯಕ್ರಮ ಅನಿಸಲಿದೆ. ಚಿಕ್ಕಮಗಳೂರು ಜಿಲ್ಲೆಯ ಐವತ್ತು ಸಹಸ್ರ ಭಕ್ತರು ಅಂದು ಶೃಂಗೇರಿಯಲ್ಲಿ ಸೇರಿ ಸ್ತೋತ್ರ ಸಮರ್ಪಣೆ ಮಾಡಲಿದ್ದಾರೆ. ಇದಕ್ಕಾಗೇ ಬರದ ಸಿದ್ಧತೆ ನಡೆಯುತ್ತಿದೆ. ಹಾಸನ, ಶಿವಮೊಗ್ಗ, ಉಡುಪಿ, ಮಂಗಳೂರು ಜಿಲ್ಲೆಗಳ ಅನೇಕ ತಾಲೂಕುಗಳಿಂದಲೂ ತಾವೇ ವಿಶೇಷ ಬಸ್ ಮಾಡಿಕೊಂಡು ಜನ ಆಗಮಿಸಲಿದ್ದಾರೆ.
ಇದರ ಜೊತೆಗೆ ಶಿವ ಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರ ಪರಶಿವನ ಸ್ತೋತ್ರ. 27 ನಕ್ಷತ್ರಗಳಂತೆ ಇದೂ 27 ಶ್ಲೋಕಗಳನ್ನು ಒಳಗೊಂಡಿದ್ದು ನಮ:ಶಿವಾಯ ಒಳಗೊಂಡಿರುವ ಸುಂದರ ಗೀತೆಗಳು. ಇದರ ಜೊತೆಗೆ ಲಕ್ಷ್ಮೀನರಸಿಂಹ ಕರುಣಾರಸ ಸ್ತೋತ್ರ .ಇದು ಲಕ್ಷ್ಮೀನರಸಿಂಹನನ್ನು ಸ್ತುತಿಸುವ 17 ಶ್ಲೋಕಗಳನ್ನೊಳಗೊಂಡಿದೆ. ಈ ತ್ರಿವೇಣಿ ಸ್ತೋತ್ರಗಳನ್ನು ಪ್ರತಿಯೋರ್ವ ಸನಾತನಿಯೂ ಮನೆಯಲ್ಲಿ ನಿತ್ಯ ಪಾರಾಯಣ ಸತತ ನಡೆಸಿ ಲೋಕದಲ್ಲಿ ಶಾಂತಿ ಸುಭಿಕ್ಷೆಗಾಗಿ ಭಗವಂತನಲ್ಲಿ ಪ್ರಾರ್ಥಿಸುವ ಮೂಲಕ ಸುವರ್ಣ ಮಹೋತ್ಸವ ಆಚರಿಸಬೇಕು ಎಂದು ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ಸೂಚಿಸಿದರು.
ಶಂಕರಭಗವತ್ಪಾದರು ಆರಂಭಿಸಿದ ಮಠ ಪರಂಪರೆಯಾದರೂ ಸನಾತನ ಧರ್ಮದ ಸಂರಕ್ಷಣೆಯ ಮಹೋದ್ದೇಶ ಉಳ್ಳದ್ದು. ಅವರು ದೇಶದ ನಾಲ್ಕು ಮೂಲೆಗಳಲ್ಲಿ ಆರಂಭಿಸಿದ ನಾಲ್ಕು ಮಠಗಳಲ್ಲಿ ಶೃಂಗೇರಿಯ ಧಕ್ಷಿಣಾಮ್ನಾಯ ಶಾರದಾಪೀಠ ಮೊದಲಿನದ್ದು. ತಮ್ಮ ಪ್ರಥಮ ಜೇಷ್ಠ ಶಿಷ್ಯ ಶ್ರೀ ಸುರೇಶ್ವರಾಚಾರ್ಯರನ್ನೇ ಅವರು ಶೃಂಗೇರಿಯ ಪ್ರಥಮ ಪೀಠಾದಿಪತಿಗಳಾಗಿ ನಿಯುಕ್ತಿಗೊಳಿಸಿದರು. ಶಂಕರರು ಹಾಕಿಕೊಟ್ಟ ಮಾರ್ಗದಲ್ಲೇ ಶೃಂಗೇರಿಯ ಪೀಠ ಪ್ರತಿ ಹೆಜ್ಜೆಯನ್ನೂ ಇಡುತ್ತಿದೆ. ಈ ಸ್ತೋತ್ರ ವೈಭವ ಸಹ ಅದಕ್ಕೆ ಪ್ರತ್ಯಕ್ಷ ನಿರೂಪಣೆಯಾಗಿದೆ.
ಮಠದ ಸಮಸ್ತ ಜವಾಬ್ದಾರಿಯಿಂದ ಶ್ರೀ ಭಾರತೀತೀರ್ಥರು ನಿವೃತ್ತರಾದರು. ತಮ್ಮನ್ನು ತಮ್ಮಷ್ಟಕ್ಕೇ ಬಿಡಿ, ಇನ್ನು ಮುಂದೆ ನಮ್ಮ ಶಿಷ್ಯರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಹೇಳಿ ಕಳೆದ ದಶಕದಿಂದಲೂ ಅವರು ಆಧ್ಯಾತ್ಮಿಕ ಚಿಂತನೆಗೇ ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ಅವರೀಗ ಕಿರೀಟ ಧಾರಣೆ ಮಾಡುವುದಿಲ್ಲ. ಹೆಚ್ಚಾಗಿ ಯಾರನ್ನೂ ಬೇಟಿ ಆಗುವುದಿಲ್ಲ.ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ.ತಾವಾಯಿತು ತಮ್ಮ ಶಾರದಾ ಚಂದ್ರಮೌಳೇಶ್ವರ ಪೂಜೆಯಾಯಿತು,ಅಧ್ಯಯನ ವಾಯಿತು,ಶಂಕರ ಭಾಷ್ಯದ ಪಠಣ ವಾಯಿತು ಇಷ್ಟೇ ಅವರ ದಿನಚರಿ. ಈ ಮಠದ ಲೌಕಿಕ ವ್ಯವಹಾರವನ್ನು ಎಂದು ಕಳಚಿಕೊಂಡೇನೋ ಎಂದು ಕಾಯುತ್ತಿದ್ದಂತೆ ಅವರು ಶಿಷ್ಯ ಸ್ವೀಕಾರ ಆಗುತ್ತಿದ್ದಂತೆ ಲೌಕಿಕ ನಿವೃತ್ತಿ ಪಡೆದು ಬಿಟ್ಟರು.
ಜನವರಿ ಬಂತೆಂದರೆ ಶೃಂಗೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಏರುತ್ತಲೇ ಹೋಗುತ್ತದೆ. ಪ್ರತಿ ದಿನ ಹತ್ತಾರು ಸಹಸ್ರ ಜನ ಬೇಟಿ ನೀಡುತ್ತಾರೆ. ಶನಿವಾರ, ಭಾನುವಾರ ಮತ್ತು ರಜಾ ದಿನಗಳಂದು ಈ ಸಂಖ್ಯೆ ಇಪ್ಪತ್ತೈದು ಸಹಸ್ರ ದಾಟುತ್ತದೆ. ಜನವರಿ 11 ರಂದು ಪಾಲ್ಗೊಳ್ಳುವ ಐವತ್ತು ಸಾವಿರ ಜನಕ್ಕೂ ಕುಡಿವ ನೀರು, ಶಾರದಮ್ಮನ ಪ್ರಸಾದ, ಶೃಂಗೇರಿಯ ವಿರಣೆಯ ಪುಸ್ತಕ, ತಂಪು ಪಾನೀಯ,ಬಿಸ್ಕತ್ ಪೊಟ್ಟಣ ಮತ್ತು ಅವರ ಮನೆ ಬೆಳಗುತ್ತಲೇ ಇರಲಿ ಎಂಬ ಕಾರಣಕ್ಕೆ ದೀಪ ಇದನ್ನು ಕೊಡಲು ನಿರ್ಧರಿಸಲಾಗಿದ್ದು ಶೃಂಗೇರಿಯ ಸುತ್ತಲಿನ ದೊಡ್ಡ ಸಂಖ್ಯೆಯ ಮಾತೆಯರು ಪ್ರತಿ ನಿತ್ಯ ಎಲ್ಲವನ್ನೂ ಜೋಡಿಸಲು ಸ್ವಯಂಸೇವಕರಾಗಿ ದುಡಿಯುತ್ತಿದ್ದಾರೆ.
ಶೃಂಗೇರಿಯಂತ ಸಣ್ಣ ಊರು ಒಂದು ಬೃಹತ್ತಾದ ಸಾಮೂಹಿಕ ಸ್ತೋತ್ರ ಪಠಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಎಂದರೆ ಯಾವ ನಾಯಕರನ್ನೂ ಅಭ್ಯಾಗತರಾಗಿ ಕರೆದಿಲ್ಲ. ಬರುವವರೆಲ್ಲಾ ಕೇವಲ ಭಕ್ತರಾಗೇ ಬರಬೇಕು. ಸ್ತೋತ್ರ ಪಠಿಸಬೇಕು. ಸನ್ನಿಧಾನದ ಆಶೀರ್ವಾದ ಕೇಳಿ ಶ್ರೀ ಭಾರತೀತೀರ್ಥ ಮಹಾಸನ್ನಿಧಾನದ ದರ್ಶನ ಭಾಗ್ಯ ಪಡೆದು ಪುನೀತರಾಗಿ ಪುಣ್ಯ ಹೊತ್ತು ಹಿಂತಿರುಗಬೇಕು.
ಗುರುವಿನ ಮನೋಗತವನ್ನು ಪರಿಪಕ್ವ ಹದವಾಗಿ ವಾಗಿ ಅರಿತ ನುರಿತ ಶಿಷ್ಯ ನ ದೃಷ್ಟಿಕೋನವಿದೆ. ಹಾಗಾಗಿಯೇ ತನ್ನ ಗುರುವಿನ ಸನ್ಯಾಸ ಸ್ವೀಕಾರದ ಸಾರ್ಥಕ 50 ವರ್ಷ ಗಳ ಪರ್ವ ಕಾಲವನ್ನು ಅತ್ಯಂತ ವಿಶಿಷ್ಟ ವಾಗಿ ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮೀಜಿ ಇವರು ಆಯೋಜಿಸಿ ಸೈ ಎನ್ನಿಸಿಕೊಂಡಿದ್ದಾರೆ. ಈ ಪೀಠ ಪರಂಪರೆ ಯ ಪೂರ್ವ ಯತಿಗಳೆಲ್ಲರ ಎರಕದಂತಿರುವ ಗುರು ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮೀಜಿ ಇವರ ಚಲನಶೀಲ ಧಾರ್ಮಿಕ ಕರ್ತವ್ಯ, ಮತ್ತು ಪ್ರಯೋಗಶೀಲತೆ ಅಧ್ಯಾತ್ಮ ರಥ ಬೀದಿಯ ಮಹಾ ಮೆರವಣಿಗೆ ಆಗಿರಲಿ.
ಇದನ್ನೂ ಓದಿ : ಕನ್ನಡ ಚಿತ್ರರಂಗದ ಪ್ರಮುಖರಿಗೆ ‘ಡಾಲಿ’ ಆಮಂತ್ರಣ – ಧನಂಜಯ್ಗೆ ಮದುವೆಯ ಶುಭಕೋರಿದ ಸ್ಯಾಂಡಲ್ವುಡ್ ಸ್ಟಾರ್ಸ್!