ಬೆಂಗಳೂರು : ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್‌ಗೆ ಪಂಚೆ ಧರಿಸಿ ಬಂದಿದ್ದ ರೈತರೊಬ್ಬರನ್ನು ಒಳಗೆ ಬಿಡದೆ ಅವಮಾನ ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಲ್ ವಿರುದ್ಧ ಕೆಪಿ ಅಗ್ರಹಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೌದು, ಮಂಗಳವಾರ ಸಂಜೆ ಹಾವೇರಿ ಮೂಲದ ನಾಗರಾಜ್ ಎಂಬವರು ತಮ್ಮ ತಂದೆ-ತಾಯಿಗೆ ಸಿನಿಮಾ ತೋರಿಸಲು ಅವರನ್ನು ಜಿ.ಟಿ ವರ್ಲ್ಡ್ ಮಾಲ್‌ಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ನಾಗರಾಜ್ ತಂದೆಯನ್ನು ಪಂಚೆ ಧರಿಸಿದ್ದಕ್ಕೆ ಒಳಗೆ ಬಿಡದೆ ಜಿ.ಟಿ ಮಾಲ್ ಸಿಬ್ಬಂದಿ ಅವಮಾನಿಸಿದ್ದರು. ಇದೀಗ ರೈತನನ್ನು ಅವಮಾನಿಸಿದ್ದ ಜಿ.ಟಿ ಮಾಲ್ ವಿರುದ್ಧ BNS ಆ್ಯಕ್ಟ್ 126(2) ಅಡಿಯಲ್ಲಿ ಬೆಂಗಳೂರಿನ ಕೆಪಿ ಅಗ್ರಹಾರ ಠಾಣೆಯಲ್ಲಿ FIR ದಾಖಲಾಗಿದೆ.
ಮಾಲ್‌ನ ಆಡಳಿತ ಮಂಡಳಿ ಹಾಗೂ ರೈತನ ಪ್ರವೇಶ ತಡೆದ ಸಿಬ್ಬಂದಿ ಅರುಣ್ ವಿರುದ್ಧ FIR ದಾಖಲಾಗಿದ್ದು, ಸಿಬ್ಬಂದಿ ಅರುಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಕೆಯಾಗಿದೆ. ಕರವೇ ಮುಖಂಡ ಧರ್ಮರಾಜಗೌಡ ಎನ್ನುವವರ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ನಿನ್ನೆ ಈ ಘಟನೆಯ ಕುರಿತು ದೊಡ್ಡ ಮಟ್ಟದಲ್ಲಿ ಮಾಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಮಾಲ್‌ನ ಸೆಕ್ಯೂರಿಟಿ ಮೇಲ್ವಿಚಾರಕ ಯಶವಂತ್ ಅವರು ಕ್ಷಮೆ ಕೋರಿದ್ದರು.
ಇದನ್ನೂ ಓದಿ : ಕನ್ನಡಿಗರಿಗೆ ಉದ್ಯೋಗ ಮೀಸಲಾತಿ – ರಾಜ್ಯ ಸರ್ಕಾರ ಮಸೂದೆ ತಡೆಹಿಡಿದಿದ್ದೇಕೆ?