ಬಿ ಟೌನ್ ಸುಂದರಿ, ನೀಲಿ ಕಣ್ಣಿನ ಚೆಲುವೆ ಐಶ್ವರ್ಯಾ ರೈ ಸಿನಿಮಾ ಮಾತ್ರವಲ್ಲದೇ ಮಾಡೆಲಿಂಗ್ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಜಾಗತಿಕ ಮಟ್ಟದ ಸೌಂದರ್ಯ ವರ್ಧಕ ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿರುವ ಅವರು ಹಲವು ವರ್ಷಗಳಿಂದ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಅವರು ರೆಡ್ ಕಾರ್ಪೆಟ್ನಲ್ಲಿ ಮಿಂಚಿದ್ದಾರೆ.
ಅಚ್ಚರಿ ಏನೆಂದರೆ, ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಅವರು ರೆಡ್ ಕಾರ್ಪೆಟ್ನಲ್ಲಿ ನಡೆದು ಬಂದಿದ್ದಾರೆ. ಅವರ ಫೋಟೋ ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅವರ ಆತ್ಮವಿಶ್ವಾಸಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.
ಬುಧವಾರ (ಮೇ 15) ರಾತ್ರಿ ಐಶ್ವರ್ಯಾ ರೈ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರ ಕೈಗೆ ಗಾಯ ಆಗಿದ್ದನ್ನು ನೋಡಿ ಫ್ಯಾನ್ಸ್ಗೆ ಬೇಸರ ಆಗಿತ್ತು. ಕೈಗೆ ಪೆಟ್ಟಾಗಿರುವುದರಿಂದ ಈ ಬಾರಿ ಅವರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕುವುದು ಅನುಮಾನ ಎಂದು ಅನೇಕರು ಭಾವಿಸಿದ್ದರು. ಆದರೆ ಐಶ್ವರ್ಯಾ ರೈ ಅವರು ತಮ್ಮ ಬದ್ಧತೆ ತೋರಿಸಿದ್ದಾರೆ.
ಕೈಗೆ ಪೆಟ್ಟಾಗಿದೆ ಎಂಬ ನೆಪ ಹೇಳದೇ ಐಶ್ವರ್ಯಾ ರೈ ಅವರು ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿ ಆಗಿದ್ದಾರೆ. ಕಪ್ಪು, ಬಿಳಿ ಮತ್ತು ಗೋಲ್ಡನ್ ಬಣ್ಣಗಳಿಂದ ವಿನ್ಯಾಸಗೊಂಡ ಗೌನ್ ಧರಿಸಿ ಅವರು ಮಿಂಚಿದ್ದಾರೆ. ಬಲಗೈನಲ್ಲಿ ಬ್ಯಾಂಡೇಜ್ ಇದ್ದರೂ ಕೂಡ ಅವರು ಆ ಬಗ್ಗೆ ಹೆಚ್ಚು ಗಮನ ನೀಡಿಲ್ಲ. ಮೊದಲೇ ಒಪ್ಪಿಕೊಂಡ ಈ ಕೆಲಸವನ್ನು ಅವರು ಎಂದಿನ ಉತ್ಸಾಹದಲ್ಲಿ ಮಾಡಿ ಮುಗಿಸಿದ್ದಾರೆ. ಅವರ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಅವರಿಗೆ ಕಾನ್ ಚಿತ್ರೋತ್ಸವ ಹೊಸದೇನೂ ಅಲ್ಲ. 2002ರಲ್ಲಿ ಅವರು ಮೊದಲ ಬಾರಿಗೆ ಕಾನ್ ಚಿತ್ರೋತ್ಸವದ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದರು. ಅಂದಿನಿಂದ ಇಂದಿನ ತನಕ ಅವರು ಪ್ರತಿ ವರ್ಷವೂ ಅಲ್ಲಿಗೆ ತೆರಳಿ ತಮ್ಮ ಹೆಜ್ಜೆ ಹಾಕಿದ್ದಾರೆ. ಈವರೆಗೂ 21 ಬಾರಿ ಅವರು ಕಾನ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ನಲ್ಲಿ ವಾಕ್ ಮಾಡಿದ್ದಾರೆ. ಈ ಬಾರಿ ಕೈಗೆ ಪೆಟ್ಟಾಗಿದ್ದನ್ನು ಕೂಡ ಅವರು ಲೆಕ್ಕಿಸದೇ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ನಗುಮುಖದಿಂದ ಪೋಸ್ ನೀಡಿದ್ದಾರೆ.
ಇದನ್ನೂ ಓದಿ : ‘ಸಿ’ ಸಿನಿಮಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್..!