ಬೆಂಗಳೂರು : ರಾಜಾಜಿನಗರದ EV ಸ್ಕೂಟರ್ ಶೋರೂಂನಲ್ಲಿ ಮಂಗಳವಾರ ಸಂಜೆ ಅಗ್ನಿ ಅವಘಡ ಸಂಭವಿಸಿ ಯುವತಿ ಮೃತಪಟ್ಟ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಎಲೆಕ್ಟ್ರಿಕ್ ಸ್ಕೂಟರ್ ಒಂದರ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿದೆ ಎನ್ನಲಾಗಿದೆ. ಇನ್ನು ಶೋರೂಂನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದೇ ದುರ್ಘಟನೆಗೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.
ಹಾಗಾಗಿ ಶೋರೂಂ ಮಾಲೀಕರ ನಿರ್ಲಕ್ಷ್ಯದ ವಿರುದ್ಧ ಮೃತ ಯುವತಿ ಪ್ರಿಯಾ ಸಹೋದರ ಪ್ರತಾಪ್ ರಾಜಾಜಿನಗರ ಠಾಣೆಗೆ ದೂರು ನೀಡಿದ್ದರು. ಇದೀಗ ದೂರನ್ನು ಆಧರಿಸಿ ಶೋರೂಂ ಮಾಲೀಕ ಪುನೀತ್ ಗೌಡ, ಮ್ಯಾನೇಜರ್ ವಿರುದ್ಧ BNS 106 (ನಿರ್ಲಕ್ಷ್ಯ) ಅಡಿಯಲ್ಲಿ FIR ದಾಖಲಿಸಲಾಗಿದೆ.
ಇಂದು ಹುಟ್ಟು ಹಬ್ಬ ಆಚರಿಸಬೇಕಿದ್ದ ಯುವತಿ ಸಜೀವ ದಹನ : ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಶೋರೂಂ ಸಿಬ್ಬಂದಿ ಓಕಳಿಪುರದ ನಿವಾಸಿ ಪ್ರಿಯಾ ಸಜೀವ ದಹನವಾಗಿದ್ದಾರೆ. ಈಕೆ ಇಂದು (ನ.20) ತನ್ನ ಹುಟ್ಟುಹಬ್ಬ ಆಚರಿಸಬೇಕಿತ್ತು. ಅದಕ್ಕೂ ಮುನ್ನ ದುರಂತ ಅಂತ್ಯ ಕಂಡಿದ್ದಾರೆ. “ಹುಟ್ಟುಹಬ್ಬಕ್ಕಾಗಿ ಪ್ರಿಯಾ ಕಳೆದ ಭಾನುವಾರ ಹೊಸ ಬಟ್ಟೆ ಖರೀದಿಸಿದ್ದರು. ಈಗ ಹುಟ್ಟುಹಬ್ಬ ಆಚರಿಸಲು ಆಕೆಯೇ ಇಲ್ಲ” ಎಂದು ತಂದೆ ಆರ್ಮುಗಂ ಕಣ್ಣೀರಿಟ್ಟಿದ್ದಾರೆ.
ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ ಪ್ರಿಯಾ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ವಿಕ್ಟೋರಿಯಾ ಆಸ್ಪತ್ರೆ ಬಳಿ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಪೋಷಕರಿಗೆ ಹಸ್ತಾಂತರ ಮಾಡಲಾಗುತ್ತದೆ.
ಇನ್ನು ಶೋರೂಂನ ಮತ್ತೊಬ್ಬ ಸಿಬ್ಬಂದಿ ದಿಲೀಪ್ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿಲೀಪ್ ಅವರ ಕೈಗಳಿಗೆ ಸುಟ್ಟ ಗಾಯಗಳಾಗಿವೆ. ದುರಂತ ನಡೆದಾಗ ಶೋರೂಂನಲ್ಲಿದ್ದ ವೇದಾವತಿ ಮತ್ತು ರಾಜು ಎಂಬವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿ ಅವಘಡದಲ್ಲಿ ಶೋರೂಮ್‌ನಲ್ಲಿದ್ದ ಸುಮಾರು 40 ಸ್ಕೂಟರ್‌ಗಳ ಪೈಕಿ 25 ಸ್ಕೂಟರ್‌ಗಳು, ಪೀಠೋಪಕರಣಗಳೂ ಸುಟ್ಟು ಕರಕಲಾಗಿವೆ.
ಇದನ್ನೂ ಓದಿ : ‘ಇಲ್ಲಿ ಎಲ್ಲರೂ ತಿಪ್ಪೆಗುಂಡಿ’ – ದೊಡ್ಮನೆ ಸ್ಪರ್ಧಿಗಳ ವಿರುದ್ಧ ಗುಡುಗಿದ ಹನುಮಂತ.. ಕಾರಣವೇನು?