ದರ್ಶನ್ ಅಭಿನಯದ “ಸಾರಥಿ” ಚಿತ್ರವನ್ನು ನಿರ್ಮಿಸಿದ್ದ ಕೆ.ವಿ.ಸತ್ಯಪ್ರಕಾಶ್ ಅವರು 12 ವರ್ಷಗಳ ನಂತರ “ಸಾರಥಿ ಫಿಲಂಸ್” ಮೂಲಕ ನೂತನ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಿರ್ಮಾಣಕ್ಕೆ ಸತ್ಯಪ್ರಕಾಶ್ ಅವರ ಪುತ್ರ ಸೂರಜ್ ಗೌಡ ಅವರು ಸಾಥ್ ನೀಡುತ್ತಿದ್ದಾರೆ. “ಜಂಟಲ್ ಮ್ಯಾನ್”, ” ಗುರುಶಿಷ್ಯರು” ಚಿತ್ರಗಳ ನಿರ್ದೇಶಕ ಹಾಗೂ “ಕಾಟೇರ” ಚಿತ್ರದ ಲೇಖಕ ಜಡೇಶ ಕೆ ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್ ನಾಯಕರಾಗಿ ನಟಿಸುತ್ತಿರುವ 29ನೇ ಚಿತ್ರ “ವಿ ಕೆ 29″ರ ಮುಹೂರ್ತ ಸಮಾರಂಭ ಇತ್ತೀಚಿಗೆ ಮಹಾಲಕ್ಷ್ಮೀಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ಶಾಸಕ ಶ್ರೀ ಗೋಪಲಯ್ಯ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದ್ದು, ನಿರ್ದೇಶಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ (ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. “ಡೇರ್ ಡೆವಿಲ್ ಮುಸ್ತಫಾ” ಖ್ಯಾತಿಯ ಶಿಶಿರ್ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಹೂರ್ತ ಸಮಾರಂಭದ ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ.
ಇದು ನಾನು ಕಂಡ, ಕೇಳಿದ ಹಾಗೂ ನೋಡಿದ ನೈಜ ಕಥೆ ಎಂದು ನಿರ್ದೇಶಕ ಜಡೇಶ ಕೆ ಹಂಪಿ ಹೇಳಿದ್ದಾರೆ. ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ. ಕೋಲಾರ ಭಾಗದಲ್ಲಿ ನಡೆಯುವ ಕಥೆಯಾಗುವುದರಿಂದ ಸಂಭಾಷಣೆ ಕೋಲಾರದ ಭಾಷೆಯಲ್ಲೇ ಇರುತ್ತದೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ಅವರು ಕೋಲಾರದವರೆ ಆಗಿರುವುದು ವಿಶೇಷ.ಇದು 90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶಿವರಾಮ ಕಾರಂತರ “ಚೋಮನ ದುಡಿ”ಯ ಚೋಮನ ಪಾತ್ರ ಈ ಚಿತ್ರಕ್ಕೆ ಸ್ಪೂರ್ತಿ. ಹಾಗಂತ “ಚೋಮನ ದುಡಿ” ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಇನ್ನು ಈ ಚಿತ್ರವನ್ನು ಜಗದೀಶ್ ಅವರು ನಿರ್ಮಿಸಬೇಕಿತ್ತು. ಕಾರಣಾಂತರದಿಂದ ಆಗಲಿಲ್ಲ. ಆನಂತರ ಸ್ನೇಹಿತರೊಬ್ಬರ ಮೂಲಕ ಸತ್ಯಪ್ರಕಾಶ್ ಅವರ ಪರಿಚಯವಾಯಿತು. ಅವರು ಹಾಗೂ ಅವರ ಮಗ ಸೂರಜ್ ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡರು. ಕೇವಲ ಇಪ್ಪತ್ತು ದಿನಗಳಲ್ಲಿ ಚಿತ್ರಕ್ಕೆ ಚಾಲನೆ ದೊರಕಿದೆ.
ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗುತ್ತಿದೆ. ಉಳಿದಂತೆ ಕೋಲಾರ, ಮೈಸೂರಿನಲ್ಲೂ ಚಿತ್ರೀಕರಣ ನಡೆಯಲಿದೆ. ನಾಯಕ ವಿಜಯ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಚಿತಾರಾಮ್ ಈ ಚಿತ್ರದ ನಾಯಕಿ. ದುನಿಯಾ ವಿಜಯ್ ಪುತ್ರಿ ಮೋನಿಕಾ ಈ ಚಿತ್ರದ ಮೂಲಕ ರಿತನ್ಯ ಎಂದು ಹೆಸರು ಬದಲಾವಣೆ ಮಾಡಿಕೊಂಡು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಶಿಶಿರ್ ಕೂಡ ಮುಖ್ಯಪಾತ್ರದಲ್ಲಿದ್ದಾರೆ. ಸ್ವಾಮಿ ಗೌಡ ಛಾಯಾಗ್ರಹಣ ಹಾಗೂ ಮಾಸ್ತಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದರು.
ಈ ಚಿತ್ರದ ವಿಶೇಷವೆಂದರೆ ತಂದೆ – ಮಗ ನಿರ್ಮಿಸುತ್ತಿದ್ದಾರೆ. ತಂದೆ – ಮಗಳು ಅಭಿನಯಿಸುತ್ತಿದ್ದೇವೆ. ನನ್ನ ಮಗಳು ರಿತನ್ಯ, ಮುಂಬೈನ ಅನುಪಮ್ ಖೇರ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯದ ಕುರಿತು ಕಲಿತು ಬಂದಿದ್ದಾಳೆ. ಈ ಚಿತ್ರದಲ್ಲೂ ನನ್ನ ಮಗಳ ಪಾತ್ರದಲ್ಲೇ ಅಭಿನಯಿಸುತ್ತಿದ್ದಾಳೆ. ನಾನು ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷ ಹಾಗೂ ನಾಯಕನಾಗಿ ಹದಿನೆಂಟು ವರ್ಷಗಳಾಗಿದೆ. ಈ ಸಂದರ್ಭದಲ್ಲಿ ನನ್ನ ಮಗಳು ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾಳೆ. ಒಬ್ಬ ತಂದೆ ಮಗಳಿಗಾಗಿ ಏನೆಲ್ಲಾ ಕೊಡಬಹುದು? ಸ್ಕ್ರಿಪ್ಟ್ ನಲ್ಲೂ ಅರ್ಧಭಾಗ ಕೊಡಬಹುದು ಎಂದು ತಿಳಿಸಿದ ದುನಿಯಾ ವಿಜಯ್, ನಿರ್ದೇಶಕ ಜಡೇಶ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಜಡೇಶ್ ಕನ್ನಡ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಾಗುವುದು ಖಂಡಿತ. ಬಹಳ ವರ್ಷಗಳ ನಂತರ ಸತ್ಯಪ್ರಕಾಶ್ ಅವರು ನಿರ್ಮಾಣಕ್ಕೆ ಮರಳಿದ್ದಾರೆ. ಅವರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ನಾಯಕ ದುನಿಯಾ ವಿಜಯ್ ಶುಭಕೋರಿದ್ದಾರೆ.
ಮೊದಲ ಚಿತ್ರ ಅಪ್ಪನ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ. ಈ ಚಿತ್ರದಿಂದ ನನ್ನ ಹೆಸರನ್ನು ರಿತನ್ಯ ಎಂದು ಬದಲಿಸಿಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ನನಗಿರಲಿ ಎಂದರು ರಿತನ್ಯ(ಮೋನಿಕಾ) ಹೇಳಿದರು.
“ಸಾರಥಿ” ಚಿತ್ರ ನನಗೆ ತುಂಬಾ ಕೀರ್ತಿ ತಂದುಕೊಟ್ಟ ಚಿತ್ರ. ಆನಂತರ ಕೆಲವು ಚಿತ್ರಗಳ ಕಥೆ ಕೇಳಿದ್ದೆ. ಕಾರಣಾಂತರದಿಂದ ನಿರ್ಮಿಸಲು ಆಗಿರಲಿಲ್ಲ. ಜಡೇಶ್ ಅವರ ಕಥೆ ಇಷ್ಟವಾಯಿತು. ಕೇವಲ ಇಪ್ಪತ್ತು ದಿನಗಳಲ್ಲಿ ಚಿತ್ರ ಆರಂಭವಾಯಿತು. ನಿರ್ಮಾಣದಲ್ಲಿ ನನ್ನ ಜೊತೆಗೆ ಮಗ ಸೂರಜ್ ಗೌಡ ಇದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ನಿರ್ಮಾಪಕ ಸತ್ಯಪ್ರಕಾಶ್ ತಿಳಿಸಿದರು.
ಇದನ್ನೂ ಓದಿ : ಕಿರುತೆರೆ ನಟ ಸ್ಕಂದ ಅಶೋಕ್ ಫೇಸ್ಬುಕ್, ಇನ್ಸ್ಟಾಗ್ರಾಮ್ ಅಕೌಂಟ್ ಹ್ಯಾಕ್ ಮಾಡಿ ದುರ್ಬಳಕೆ : ವಂಚಕರ ವಿರುದ್ಧ ಪ್ರಕರಣ ದಾಖಲು..!