ದೆಹಲಿ : ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ವ್ರತ ಕೈಗೊಂಡಿದ್ದಾರೆ. ಪ್ರಾಣಪ್ರತಿಷ್ಠೆಗಾಗಿ ಮೋದಿ ಯಮ ನಿಯಮ ವ್ರತಾಚರಣೆಯನ್ನು ಮಾಡುತ್ತಿದ್ದು, ಅದರ ಅಂಗವಾಗಿ ಜ.12ರಿಂದ ನೆಲದ ಮೇಲೆ ಮಲಗುತ್ತಾ, ಕೇವಲ ಎಳನೀರು ಸೇವಿಸಿ ಉಪವಾಸ ಮಾಡುತ್ತಿದ್ದಾರೆ.
11-ದಿನಗಳ ಈ ವಿಶೇಷ ವ್ರತದಲ್ಲಿ, ಧ್ಯಾನ ಮತ್ತು ವಿಶೇಷ ಸಾತ್ವಿಕ ಆಹಾರದೊಂದಿಗೆ ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸುವುದು ಸೇರಿದೆ. ಈ ನಿಯಮಗಳ ಪ್ರಕಾರ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಲವಾರು ಇತರ ವಸ್ತುಗಳ ಸೇವನೆಯನ್ನು ನಿರ್ಬಂಧಿಸಲಾಗುತ್ತದೆ. ಮೋದಿಯವರು ಈ ನಿಯಮಗಳು ಮತ್ತು ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ.
ಮೋದಿ ಪ್ರತಿದಿನ ಸೂರ್ಯೋದಯಕ್ಕೂ ಮೊದಲೇ ಏಳುವುದು, ಧ್ಯಾನ ಮಾಡುವುದು, ಸಾತ್ವಿಕ ಆಹಾರ ಮಾತ್ರ ಸೇವಿಸುವುದು ಮುಂತಾದ ನಿಯಮಗಳನ್ನು ಸಾಮಾನ್ಯ ದಿನಗಳಲ್ಲೂ ಪಾಲಿಸುತ್ತಾರೆ. ಆದರೆ ಈಗ ಶ್ರೀರಾಮನ ಪ್ರಾಣ ಪ್ರತಿಷ್ಠೆಗಾಗಿ ಉಪವಾಸ ಹಾಗೂ ನೆಲದ ಮೇಲೆ ಮಲಗುವ ವ್ರತದಲ್ಲೂ ತೊಡಗಿದ್ದಾರೆ.
ಪ್ರಾಣ ಪ್ರತಿಷ್ಠಾ ಎಂದರೆ ವಿಗ್ರಹಕ್ಕೆ ದೈವಿಕ ಅಂಶಗಳನ್ನು ತುಂಬುವುದು. ಜ.22ರ ಮಧ್ಯಾಹ್ನ 12:30ಕ್ಕೆ ರಾಮಮದಿರದಲ್ಲಿ ಅದರ ಶುಭ ಮುಹೂರ್ತವಾಗಿದೆ. ಈ ವಿಧಿವಿಧಾನ ದೇವಾಲಯದಲ್ಲಿ ಪೂಜಿಸುವ ಪ್ರತಿಯೊಂದು ವಿಗ್ರಹಕ್ಕೂ ಅತ್ಯಗತ್ಯವಾಗಿರುತ್ತದೆ. ಪ್ರಾಣಪ್ರತಿಷ್ಠಾಪನೆಗೆ ದೇವಾಲಯದ ಟ್ರಸ್ಟ್ನಿಂದ ವಿಶೇಷವಾಗಿ ಆಹ್ವಾನಿಸಲ್ಪಟ್ಟ ದೇಶ ಮತ್ತು ವಿದೇಶಗಳಿಂದ ಸಾವಿರಾರು ಅತಿಥಿಗಳು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ : ಅಯೋಧ್ಯೆಯಲ್ಲಿ ಮೂವರು ಶಂಕಿತರ ಅರೆಸ್ಟ್..!