70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡಕ್ಕೆ ಎರಡು ಪ್ರಶಸ್ತಿ ದೊರಕಿದೆ. ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾವು ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. ಹಾಗೆಯೇ, ಕಾಂತಾರ ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಡಬಲ್ ಧಮಾಕಾ ದೊರೆತಿದೆ.
‘ಕೆಜಿಎಫ್ 2’ ಸಿನಿಮಾ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಮತ್ತು ಅತ್ಯುತ್ತಮ ಸಾಹಸ ನಿರ್ದೇಶನ (ಸ್ಟಂಟ್ ಕೊರಿಯೋಗ್ರಫಿ) ವಿಭಾಗಗಳಲ್ಲಿ ಪ್ರಶಸ್ತಿ ಲಭಿಸಿದೆ. ಈ ಮೂಲಕ ಕೆಜಿಎಫ್ 2 ಚಿತ್ರಕ್ಕೆ ಎರಡು ಪ್ರಶಸ್ತಿಗಳು ಸಿಕ್ಕಿದೆ. ಕೆಜಿಎಫ್ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಈ ಬಗ್ಗೆ ಬಿಟಿವಿ ಜೊತೆ ಖುಷಿ ಹಂಚಿಕೊಂಡಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾವು 2022ರಲ್ಲಿ ಬಿಡುಗಡೆಯಾದ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಈ ಸಿನಿಮಾವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದರು. ಕೆಜಿಎಫ್ ಚಾಪ್ಟರ್ ಒಂದರ ಯಶಸ್ಸಿನ ಬಳಿಕ ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಗಳಿಸಿತ್ತು.
ಈ ಸಿನಿಮಾದಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ರಾವ್ ರಮೇಶ್, ವಸಿಷ್ಠ ಸಿಂಹ, ಅಯ್ಯಪ್ಪ ಪಿ.ಶರ್ಮಾ, ಅರ್ಚನಾ ಜೋಯಿಸ್, ಸರಣ್ ಶಕ್ತಿ, ಈಶ್ವರಿ ರಾವ್, ಜಾನ್ ಕೊಕ್ಕೆನ್, ಟಿ.ಎಸ್.ನಾಗಾಭರಣ ಮತ್ತು ಮಾಳವಿಕಾ ಅವಿನಾಶ್ ಮುಂತಾದವರು ನಟಿಸಿದ್ದಾರೆ. ಸುಮಾರು 100 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಲಾಗಿತ್ತು. ಇದು ಕನ್ನಡದ ದುಬಾರಿ ಬಜೆಟ್ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದೀಗ ಈ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ.
ಇದನ್ನೂ ಓದಿ : ‘ಕಾಂತಾರ’ದ ಮುಡಿಗೆ ಎರಡು ರಾಷ್ಟ್ರೀಯ ಪ್ರಶಸ್ತಿ – ರಿಷಬ್ ಶೆಟ್ಟಿಗೆ ಒಲಿದ ಬೆಸ್ಟ್ ನಟ ಅವಾರ್ಡ್..!