ಚೆನ್ನೈ : ರಾಜ್ಯದಲ್ಲಿ ಡಿನ್ನರ್ ಪಾಲಿಟಿಕ್ಸ್ ತಾರಕಕ್ಕೇರಿರುವ ಸಂದರ್ಭದಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ದೇವರ ಮೊರೆ ಹೋಗಿದ್ದಾರೆ. ಇಂದು ತಮಿಳುನಾಡಿನ ಕುಂಬಕೋಣಂನಲ್ಲಿರುವ ಶಕ್ತಿ ಸ್ವರೂಪಿಣಿ, ಉಗ್ರ ಸ್ವರೂಪಿಣಿ ಎಂದೇ ಹೆಸರಾಗಿರುವ ಪ್ರತ್ಯಂಗಿರಾ ದೇವಿಯ ದರ್ಶನ ಪಡೆದು ವಿಶೇಷ ಯಾಗವನ್ನೂ ಮಾಡಿಸಿದ್ದಾರೆ. ಡಿಕೆಶಿ ಅವರ ಈ ಭೇಟಿಯು ಕುತೂಹಲದೊಂದಿಗೆ ಭಾರೀ ಚರ್ಚೆಗೂ ಕಾರಣವಾಗಿದೆ. ರಾಜಕೀಯ ವಿರೋಧಿಗಳಿಂದ ರಕ್ಷಣೆಗೆ ಪ್ರತ್ಯಂಗಿರಾ ಯಾಗ ಮಾಡಿಸಿದ್ರಾ ಎಂಬ ಪ್ರಶ್ನೆಯೂ ಎದ್ದಿದೆ.
ಗೃಹ ಸಚಿವ ಪರಮೇಶ್ವರ್ ಆಯೋಜಿಸಿದ್ದ ಡಿನ್ನರ್ ಸಭೆಗೆ ಬ್ರೇಕ್ ಹಾಕಿದ ಬಳಿಕ ಕಾಂಗ್ರೆಸ್ನಲ್ಲಿ ಭಿನ್ನಮತ ತಾರಕಕ್ಕೆ ಏರಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಡಿನ್ನರ್ ಪಾಲಿಟಿಕ್ಸ್ ಮಾಡಿದ್ದ ಸಿಎಂ ಬಣಕ್ಕೆ, ವಿದೇಶದಿಂದ ವಾಪಸ್ ಆಗುತ್ತಲೇ ಹೈಕಮಾಂಡ್ ಮೂಲಕ ಸೈಲೆಂಟಾಗಿ ಶಾಕ್ ನೀಡುವ ಕೆಲಸವನ್ನ ಡಿಸಿಎಂ ಡಿಕೆ ಶಿವಕುಮಾರ್ ಮಾಡಿದ್ದರು. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಜ.13 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಡಿಕೆ ಶಿವಕುಮಾರ್ ದಂಪತಿ ಸಮೇತ ಶಕ್ತಿ ಸ್ವರೂಪಿಣಿ ಪ್ರತ್ಯಂಗಿರಾ ದೇವಿಯ ಮೊರೆ ಹೋಗಿದ್ದು, ಭಾರೀ ಕೂತುಹಲಕ್ಕೆ ಕಾರಣವಾಗಿದೆ.
ಪ್ರತ್ಯಂಗಿರಾ ದೇವಿ ಮಹಾತ್ಮೆ ಬಗ್ಗೆ ಕೇಳಿದ್ದೀರಾ? ಈ ಬ್ರಹ್ಮಾಂಡವನ್ನು ಕಾಲಕಾಲಕ್ಕೆ ರಕ್ಷಿಸಲು ದೇವತೆಗಳು ಮತ್ತು ದೇವರು ವಿವಿಧ ಅವತಾರಗಳನ್ನು ತಾಳಿದ್ದಾರೆ. ಅಂತಹ ಅವತಾರದಲ್ಲಿ ʻಪ್ರತ್ಯಂಗಿರಾ ದೇವಿʼಯ ಅವತಾರವೂ ಒಂದು. ಪ್ರತ್ಯಂಗಿರಾ ದೇವಿಯು ಶಕ್ತಿ ದೇವತೆಗಳಲ್ಲಿ ಉಗ್ರ ಸ್ವರೂಪಿಣಿ, ಶತ್ರು ಸಂಹಾರಕ್ಕಾಗಿ ಜನಿಸಿ ಬಂದವಳು. ಶಿವ-ವಿಷ್ಣು ಹಾಗೂ ಆದಿಶಕ್ತಿ ಈ ಮೂವರ ಅಂಶವನ್ನು ಹೊಂದಿರುವ ದೇವತೆ ಎಂಬ ನಂಬಿಕೆಯಿದೆ. ಈ ಪ್ರತ್ಯಂಗಿರಾ ದೇವಿಯು ಸಿಂಹದ ಮುಖ ಸ್ತ್ರೀಯ ದೇಹ ಹೊಂದಿದ್ದು ಸಿಂಹವನ್ನೇ ವಾಹನವಾಗಿ ಮಾಡಿಕೊಂಡಿದ್ದಾಳೆ. ಇಂದಿಗೂ ಈ ತಾಯಿಯ ಮೇಲಿನ ಜನರ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ.
ಇದನ್ನೂ ಓದಿ : ‘ಹುಚ್ಚ’ನ ಪದ ಸ್ಪೂರ್ತಿಯಿಂದ “ತುರ್ರಾ” ಹಾಡು ಬರೆದ ಯೋಗರಾಜ್ ಭಟ್ – “ಮನದ ಕಡಲು” ಸಿನಿಮಾದಿಂದ ಮತ್ತೊಂದು ಹಾಡು ರಿಲೀಸ್!