ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಜೈಲುವಾಸ ಫಿಕ್ಸ್ ಆಗಿದೆ. ಕಳೆದ 13 ವರ್ಷಗಳ ಹಿಂದೆ ಕೌಟುಂಬಿಕ ಕಲಹದಿಂದ ಸೆರೆ ಹಿಂದೆ ಸೇರಿದ್ದ ನಟನೀಗ ಮತ್ತೊಮ್ಮೆ ಜೈಲುವಾಸ ಶುರು ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನ 2 ದಿನಗಳ ಕಾಲ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಭೀಕರ ಹತ್ಯೆಗೆ ಸಂಬಂಧಿಸಿದ ಸಾಕ್ಷ್ಯಗಳ ಬಗ್ಗೆ ನಾಲ್ವರು ಆರೋಪಿಗಳ ವಿಚಾರಣೆಯನ್ನೂ ನಡೆಸಿದ್ದರು. ನಿನ್ನೆ ದರ್ಶನ್, ಪ್ರದೂಶ್, ಧನರಾಜ್, ವಿನಯ್‌ನ ಕಸ್ಟಡಿ ಅಂತ್ಯಗೊಳ್ತಿದ್ದಂತೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯದಲ್ಲಿ ಎರಡೂ ಕಡೆಯವರ ವಾದ-ಪ್ರತಿವಾದ ಆಲಿಸಿದ 24ನೇ ಎಸಿಎಂಎಂ ಕೋರ್ಟ್ ಆರೋಪಿಗಳನ್ನ ಜುಲೈ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈ ಮೂಲಕ ದರ್ಶನ್ ಅಂಡ್ ಗ್ಯಾಂಗ್ 14 ದಿನ ಜೈಲುವಾಸ ಅನುಭವಿಸಬೇಕಾಗಿದೆ. ಆರೋಪಿ ನಟ ದರ್ಶನ್ಗೆ 6109 ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿದೆ.
ರಾತ್ರಿ ಊಟಕ್ಕೆ ಚಪಾತಿ, ಅನ್ನ, ಮಜ್ಜಿಗೆ ನೀಡಿರುವ ಸಿಬ್ಬಂದಿ : ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ನಟ ದರ್ಶನ್ಗೆ ನಿನ್ನೆ ರಾತ್ರಿ ಊಟಕ್ಕೆ ಚಪಾತಿ, ಅನ್ನ, ಮಜ್ಜಿಗೆ ನೀಡಿದ್ದಾರೆ. ಚಪಾತಿ ಮಾತ್ರ ತಿಂದು ಮಜ್ಜಿಗೆ ಕುಡಿದಿರುವ ನಟ ದರ್ಶನ್ ಜೈಲು ಸಿಬ್ಬಂದಿ ಕೊಟ್ಟ ಅನ್ನ ತಿನ್ನಲು ಒಲ್ಲೆ ಎಂದಿದ್ದಾರಂತೆ. ರಾತ್ರಿ 8 ಗಂಟೆ ಸುಮಾರಿಗೆ ಜೈಲೂಟ ಸೇವಿಸಿದ ದರ್ಶನ್ ಯಾರ ಜೊತೆಗೂ ಮಾತನಾಡದೇ ಮೌನಕ್ಕೆ ಜಾರಿದ್ದಾರೆ. ಸಪ್ಪೆ ಮೊರೆ ಹಾಕಿಕೊಂಡು ನಟ ದರ್ಶನ್ ಜೈಲಲ್ಲಿ ಕುಳಿತಿದ್ದಾರೆ. ತೆಳುವಾದ ಬೆಡ್ ಶೀಟ್ ಹೊದ್ದುಕೊಂಡು ಚಳಿಗೆ ದರ್ಶನ್ ನಡುಗಿದ್ದಾರೆ. ಸೊಳ್ಳೆ ಕಾಟಕ್ಕೆ ರಾತ್ರಿಯಿಡೀ ಸರಿಯಾಗಿ ನಿದ್ರೆಯನ್ನೂ ಮಾಡಿಲ್ಲವೆಂದು ತಿಳಿದು ಬಂದಿದೆ.
ಇನ್ನು ಇದೇ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾಗೌಡ ಹಾಗೂ ಇತರರಿಗೆ ಎರಡು ದಿನಗಳ ಹಿಂದೆಯೇ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಇದನ್ನೂ ಓದಿ : ಈ ತರ ಮಾಡಿದ್ಮೇಲೆ ಯಾರು ಅವ್ರ ಪರ ನಿಲ್ತಾರೆ, ಯಾರು ನಿಲ್ಲಲ್ಲ – ದರ್ಶನ್ ಬಗ್ಗೆ ಸಚಿವ ಜಮೀರ್ ಅಹ್ಮದ್ ಏನಂದ್ರು ನೋಡಿ..!