ಬೆಂಗಳೂರು : ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ದೃಶ್ಯಗಳು ವೈರಲ್ ಆದ ಬೆನ್ನಲ್ಲೇ ಪರಪ್ಪನ ಅಗ್ರಹಾರದ ಒಂಬತ್ತು ಮಂದಿ ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ವಿ. ಶೇಷಮೂರ್ತಿ, ಸೂಪರಿಂಟೆಂಡೆಂಟ್ ಮಲ್ಲಿಕಾರ್ಜುನ್ ಸ್ವಾಮಿ, ಜೈಲರ್‌ಗಳಾದ ಶರಣಬಸವ ಅಮೀನಗಡ, ಪ್ರಭು ಎಸ್. ಖಂಡೇಲವಾಲ, ಸಹಾಯಕ ಜೈಲರ್‌ಗಳಾದ ಶ್ರೀಕಾಂತ್ ತಳವಾರ್, ಎಲ್.ಎಸ್.ತಿಪ್ಪೇಸ್ವಾಮಿ, ಮುಖ್ಯ ವಾರ್ಡರ್‌ಗಳಾದ ವೆಂಕಪ್ಪ, ಸಂಪತ್ ಕುಮಾರ್ ತಡಪಟ್ಟಿ, ವಾರ್ಡರ್ ಬಸಪ್ಪ ತೇಲಿ ಅವರನ್ನು ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ.
ಪ್ರಕರಣದ ಸಂಬಂಧ ಮೂರು ಎಫ್‌ಐಆರ್ ದಾಖಲಾಗಿದೆ. ಅಲ್ಲದೆ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ದರ್ಶನ್ ಹಾಗೂ ಅಮಾನತುಗೊಂಡಿರುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕಾರಾಗೃಹಗಳ ಇಲಾಖೆ ಡಿಐಜಿ ಸೋಮಶೇಖರ್ ದೂರು ನೀಡಿರುವ ಪ್ರತಿಯಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಎಫ್ಐಆರ್‌ಗಳು ದಾಖಲಾಗಿವೆ. ಅಧಿಕಾರಿಗಳ ಮೇಲೂ ಪೊಲೀಸರು FIR ಹಾಕಿದ್ದು, ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವ ಪರಮೇಶ್ವರ್ ಆದೇಶ ನೀಡಿದ್ದಾರೆ.
ಮೂಲಗಳ ಪ್ರಕಾರ, ಜೈಲಿನಲ್ಲಿ ಕೈದಿಗಳೇ ವಿಶೇಷ ಸೌಲಭ್ಯಕ್ಕಾಗಿ ತಮ್ಮದೇ ತಂಡ ಮಾಡಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ ಇದಕ್ಕಾಗಿ ಸಿಬ್ಬಂದಿಗಳು ನೆರವು ನೀಡುತ್ತಿದ್ದರು. ಹೊರಗಿನಿಂದ ಬರುವ ವಸ್ತುಗಳನ್ನ ಅಡ್ಜೆಸ್ಟ್‌ಮೆಂಟ್ ರೀತಿಯಲ್ಲಿ ಒಳಗಡೆ ರವಾನೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೈರಲ್ ಆದ ಫೋಟೋಗಳಲ್ಲಿರುವ ದರ್ಶನ್ ಹಾಗೂ ಇತರರನ್ನು ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ : 3 ಪ್ರಕರಣಗಳ ಪೈಕಿ ಎರಡರಲ್ಲಿ ದರ್ಶನ್ A1 – ನಟೋರಿಯಸ್ ರೌಡಿಶೀಟರ್ಗಳ ಜೊತೆ ದಾಸನ ಕೇಸ್ ಫೈಲ್..!