ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ತೀರದ ಪ್ರದೇಶಗಳಿಗೆ ಡಾನಾ ಎಂಬ ಚಂಡಮಾರುತ ಅಪ್ಪಳಿಸಲಿದ್ದು, ಎರಡು ದಿನ ಭೀಕರ ಮಳೆಯುಂಟಾಗುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಪೂರ್ವ ಮಧ್ಯ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಉತ್ತರಕ್ಕೆ ವಾಯುಭಾರ ಕುಸಿತ ಉಂಟಾಗಿದೆ. ಈ ಹಿನ್ನಲೆಯಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗಲಿದೆ. ಅ.23ರಿಂದಲೇ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಗಂಟೆಗೆ 15 ಕಿಲೋ ಮೀಟರ್ ವೇಗದಲ್ಲಿ ಹೊರಹೊಮ್ಮುವ ಡಾನಾ ಚಂಡಮಾರುತ ಮುಂದೆ ಆಗ್ನೇಯ ದಿಕ್ಕಿನಲ್ಲಿ ಗಂಟೆಗೆ 520 ಕಿಲೋ ಮೀಟರ್ ವೇಗದಲ್ಲಿ ಮುನ್ನುಗ್ಗಲಿದೆ. ಅಕ್ಟೋಬರ್ 24ರಂದು ಉತ್ತರ ಒಡಿಶಾಗೆ ಬಂದು ಅಪ್ಪಳಿಸುವ ವೇಳೆ ತನ್ನ ಕಸುವು ಕಳೆದುಕೊಳ್ಳುವ ಚಂಡಮಾರತು ಗಂಟೆಗೆ 110 ರಿಂದ 120 ಕಿಲೋ ಮೀಟರ್ ವೇಗದಲ್ಲಿ ಒಡಿಶಾ ಹಾಗೂ ಪಶ್ಚಮ ಬಂಗಾಳಕ್ಕೆ ಬಂದ ಹೊಡೆಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ. ಉಭಯ ರಾಜ್ಯಗಳಲ್ಲಿ ಅಕ್ಟೋಬರ್ 24 ಮತ್ತು 25 ರಂದು 7 ರಿಂದ20 ಸೆಂಟಿಮೀಟರ್ ಮಳೆಯಾಗುವ ಸಾಧ್ಯತೆಯೂ ಕೂಡ ಇದೆ. ಹೀಗಾಗಿ ಮೀನುಗಾರರಿಗೆ ಸಮುದ್ರದತ್ತ ತೆರಳದಿರಲು ಸೂಚನೆ ನೀಡಲಾಗಿದೆ. ಎರಡು ರಾಜ್ಯಗಳಲ್ಲೂ ರೆಡ್ ಅಲರ್ಟ್ ಘೋಷಣೆಯಾಗಿದೆ.
ಇನ್ನು ಪುರಿ, ಭುವನೇಶ್ವರ, ಜಗತ್‌ಸಿಂಗ್‌ಪುರ, ಕೇಂದ್ರಪಾರಾ, ಭದ್ರಕ್, ಬಾಲಸೋರ್, ಜಾಜ್‌ಪುರ್, ಧೆಂಕನಲ್, ಕೆಂದುಜಾರ್ ಮತ್ತು ಮಯೂರ್‌ಭಂಜ್ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಎನ್ಡಿಆರ್ಎಫ್ನ 14 ಟೀಮ್ ಪಶ್ಚಿಮ ಬಂಗಾಳಕ್ಕೆ ಹಾಗೂ 11 ಟೀಮ್ ಒಡಿಶಾಗೆ ಕಳುಹಿಸಿಕೊಡಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕನ್ನಡ ಮನಸ್ಸುಗಳೆಲ್ಲಾ ಒಂದಾಗಬೇಕು : ಸಚಿವ ಎನ್.ಚಲುವರಾಯಸ್ವಾಮಿ..!