ವಿಜಯನಗರ : ಮಳೆಯ ಅಬ್ಬರಕ್ಕೆ ಭರ್ತಿಯಾಗಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್‌ನ ಚೈನ್ ಲಿಂಕ್ ಮುರಿದಿದೆ. ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಶನಿವಾರ ಮಧ್ಯರಾತ್ರಿ ಡ್ಯಾಂನ ಕ್ರೆಸ್ಟ್ ಗೇಟ್ ನಂಬರ್ 19ರ ಚೈನ್ ಲಿಂಕ್ ಮುರಿದು ಹೋಗಿದ್ದು, ಒಂದೇ ಗೇಟ್ ಮೇಲೆ ಒತ್ತಡ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನದಿಗೆ ನೀರು ಹರಿದು ಹೋಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಇದೇ ಮೊದಲ ಬಾರಿಗೆ ಗೇಟ್ ಕಿತ್ತು ಹೋಗಿದ್ದು, ಹೀಗಾಗಿ ತುಂಗಭದ್ರಾ ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಜಲಾಶಯ ಭರ್ತಿಯಾದ್ರಿಂದ ಗೇಟ್ ದುರಸ್ಥಿ ಮಾಡಲು ಸಾಧ್ಯವಾಗ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ತುಂಗಭದ್ರಾ ಡ್ಯಾಂ ಗೇಟ್ ಕಿತ್ತುಹೋಗಿದ್ದರಿಂದ ಕಂಪ್ಲಿ ಪಟ್ಟಣದ ಜನರಲ್ಲಿ ಆತಂಕ ಮನೆ ಮಾಡಿದೆ. ಹೆಚ್ಚಿನವರು ನದಿಯತ್ತ ದಾಪುಗಾಲು ಹಾಕುತ್ತಿದ್ದಾರೆ. ಈಗಾಗಲೇ ಕಂಪ್ಲಿ ಪಟ್ಟಣ ಕೋಟೆ ಪ್ರದೇಶದ ಜನರಿಗೆ ಎಚ್ಚರಿಕೆ ಸಂದೇಶ ಕೂಡ ರವಾನಿಸಲಾಗಿದೆ. ಗೇಟ್ ಒಡೆದ ಬಳಿಕ ಆತಂಕಗೊಂಡ ಕಂಪ್ಲಿಯ ಕೋಟೆ ಪ್ರದೇಶದ ಜನರು ಜಾಗರಣೆ ಮಾಡುವ ಪರಿಸ್ಥಿತಿ ಬಂದೊದಗಿದೆ. ಮಧ್ಯರಾತ್ರಿಯೇ ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದ ಸಚಿವ ತಂಗಡಗಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ನದಿ ಪಾತ್ರದ ಜನರಿಗೆ TB ಬೋರ್ಡ್ನಿಂದಲೇ ಎಚ್ಚರಿಕೆ ರವಾನಿಸಲಾಗಿದೆ. ಕಂಪ್ಲಿ ಸೇತುವೆಗೆ ಪೊಲೀಸ್ ಬಂದೋಬಸ್ ನಿಯೋಜನೆ ಮಾಡಲಾಗಿದೆ. ನದಿ ಪಾತ್ರಕ್ಕೆ ಬಂದ ಜನರನ್ನ ಪೊಲೀಸರು ಹಿಂದಿರುಗಿ ಕಳುಹಿಸುತ್ತಿದ್ದಾರೆ. ನದಿ ಸಂಪರ್ಕದ ರಸ್ತೆಯಲ್ಲಿ ಬ್ಯಾರಿಕೇಡ್ಗಳ ಅಳವಡಿಕೆ ಮಾಡಲಾಗಿದೆ. ಯಾವ್ದೆ ಕ್ಷಣದಲ್ಲೂ ನದಿಗೆ ಇನ್ನಷ್ಟು ಪ್ರಮಾಣ ನೀರು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ? ಮಹತ್ವದ ಅಪ್‌ಡೇಟ್ ಕೊಟ್ಟ ಸಿಎಎಸ್ – ತೀರ್ಪು ಯಾವಾಗ?