ಬೆಂಗಳೂರು : ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಸುಳಿಗೆ ಸಿಲುಕಿರುವ ಸಿಎಂ ಸಿದ್ದರಾಮಯ್ಯಗೆ ಇವತ್ತು ಅಕ್ಷರಶಃ ನಿರ್ಣಾಯಕ ದಿನ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ತೀರ್ಪು ಪ್ರಕಟಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಚಿತ್ತ ರಾಜ್ಯ ಹೈಕೋರ್ಟ್‌ನತ್ತ ನೆಟ್ಟಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ಹೈಕೋರ್ಟ್ ತೀರ್ಪು : ಸಿದ್ದರಾಮಯ್ಯ ಪತ್ನಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಿಂದ ಅಕ್ರಮವಾಗಿ 14 ಸೈಟ್‌ಗಳನ್ನು ಪಡೆದಿರುವ ಆರೋಪವಿದೆ. ಇದೇ ಪ್ರಕರಣ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟಿದೆ. ಸಾವಿರಾರು ಪುಟಗಳ ದಾಖಲೆ, 6 ದಿನಗಳ ಸುದೀರ್ಘ ವಾದ ಮಂಡನೆ ಆಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ತೀರ್ಪು ಪ್ರಕಟಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ತೀರ್ಪು ಪ್ರಕಟಿಸಲಿದೆ.
ಸಿದ್ದರಾಮಯ್ಯ ಪರ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಪ್ರೋ ರವಿ ವರ್ಮ ಕುಮಾರ್ ವಾದ ಮಂಡನೆ ಮಾಡಿದ್ದರು. ಗವರ್ನರ್ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದರು. ಕಳೆದ ಸೆಪ್ಟೆಂಬರ್ 12 ರಂದು ಎರಡು ಕಡೆಯ ವಾದ ಆಲಿಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.
ಇಂದು ಕೋರ್ಟ್ ನೀಡುವ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದ್ದು, ಒಂದೊಮ್ಮೆ ತೀರ್ಪು ಸಿಎಂ ಸಿದ್ದರಾಮಯ್ಯ ಪರವಾಗಿ ಬಂದರೆ ಅವರ ಕುರ್ಚಿ ಸೇಫ್ ಆಗಲಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ರಾಜಕೀಯವಾಗಿ ಸಂಕಷ್ಟಕ್ಕೆ ಈಡಾಗಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಇನ್ನು ಹೈಕೋರ್ಟ್ ತೀರ್ಪು ಬಳಿಕ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ನಿರೀಕ್ಷೆಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳಿವೆ. ಮುಂದಿನ ಲೆಕ್ಕಾಚಾರಗಳನ್ನು ಹಾಕಿಕೊಂಡೇ ದೋಸ್ತಿಗಳು ಮುಂದೇನು ಮಾಡಬೇಕೆಂದು ರಣತಂತ್ರ ರೂಪಿಸಿವೆ. ತೀರ್ಪಿನ ಸ್ವರೂಪ, ಗಂಭೀರತೆ ನೋಡಿಕೊಂಡು ಮುಂದುವರೆಯಲು ದೋಸ್ತಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಯಾದಗಿರಿ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ನಾಲ್ವರು ಸ್ಥಳದಲ್ಲೇ ಸಾವು..!