ಮೈಸೂರು : ನಕಲಿ ದಾಖಲೆ ಸೃಷ್ಟಿಸಿ ಲೇ ಔಟ್ ನಿರ್ಮಾಣ ಮಾಡಿದ ಸಿಎಂ ಸಿದ್ದರಾಮಯ್ಯನವರ ಆಪ್ತ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಾಜಿ MLA ಎಂ.ಕೆ.ಸೋಮಶೇಖರ್ ವಿರುದ್ಧ ಎಫ್‌ಐಆರ್ ಮಾಡಿ, ತನಿಖೆ ಮಾಡುವಂತೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಎಂ.ಕೆ.ಸೋಮಶೇಖರ್ ಪತ್ನಿ ಹೆಸರಿನಲ್ಲಿ ಇರುವ ಭೂಮಿಯಲ್ಲಿ ಬಡಾವಣೆ ನಿರ್ಮಿಸುತ್ತಿದ್ದಾರೆ. ಮೈಸೂರು ತಾಲೂಕಿನ ಉದ್ಬೂರು ಗ್ರಾಮ ಸರ್ವೇ ನಂ.315ರಲ್ಲಿ ಮತ್ತು ಸರ್ವೇ ನಂ,317 ರಲ್ಲಿ ಒಟ್ಟು 9 ಎಕರೆ 21 ಗುಂಟೆ ಜಾಗದಲ್ಲಿ ಬಡಾವಣೆ ನಿರ್ಮಾಣ ಆಗುತ್ತಿದೆ.
ಸಿಎಂ ಸಿದ್ದರಾಮಯ್ಯನವರ ಆಪ್ತ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ಸುಳ್ಳು ದಾಖಲೆ ಹಾಗೂ ಸರ್ಕಾರಿ ಪತ್ರ ನಕಲಿ ಮಾಡಿರುವ ಆರೋಪ ಕೇಳಿ ಬಂದಿದೆ. ರೇರಾ ಅಧಿಕಾರಿ ಆದೀಶ್ ಸಾಗರ್ ಅವರು ಸೋಮಶೇಖರ್ ದಂಪತಿ ಹಾಗೂ ಇತರ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಎಂ.ಕೆ.ಸೋಮಶೇಖರ್ ಮತ್ತು ಪತ್ನಿ ಎಲ್.ಕುಸುಮಾ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಕೆಲವು ಅಧಿಕಾರಿಗಳು, ಉದೂರು ಗ್ರಾಮ ಪಂಚಾಯ್ತಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಭೂಮಾಪಕರು ಮತ್ತು ಇನ್ನಿತರರು ಸೇರಿಕೊಂಡ, ಒಳಸಂಚು ರೂಪಿಸಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.
ಅಕ್ರಮವಾಗಿ ಹಣ ಸಂಪಾದಿಸಲು ಕಾನೂನು ಬಾಹಿರ ಲೇ ಔಟ್ ನಿರ್ಮಾಣ ಮಾಡಿದ್ದಾರೆ. ನಕಲು ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಸರ್ಕಾರದ ದಾಸ್ತಾವೇಜುಗಳನ್ನು ಖೋಟಾ ಮಾಡಲಾಗಿದೆ ಎಂದು ಆದೀಶ್ ಸಾಗರ್ ಗಂಭೀರವಾದ ಆರೋಪ ಮಾಡಿದ್ದಾರೆ.
ಆರೋಪಿಗಳ ವಿರುದ್ಧ ತನಿಖೆ ಮಾಡಿ ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಬೆಂಗಳೂರಿನ 42ನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಮಾಡಿದೆ. ಕೋರ್ಟ್ ಆದೇಶದ ಅನ್ವಯ ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 1860 U/s 120B, 406, 409, 420, 425, 427, 464, 465, 468, 471 ಅಡಿ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ : ಕಲಬುರಗಿ : ವಿವಿ ಗ್ರಂಥಾಲಯದಲ್ಲಿ ಸರಸ್ವತಿ ಪೂಜೆಗೆ ವಿದ್ಯಾರ್ಥಿಯಿಂದ ವಿರೋಧ..!