ಬೀದರ್ : ಬೀದರ್ ಜಿಲ್ಲೆಯ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈ ಪ್ರಕರಣ ಸಂಬಂಧ ಕಾಂಗ್ರೆಸ್ – ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಸಚಿವ ಪ್ರಿಯಾಂಕ್ ಖರ್ಗೆ ರಾಜಿನಾಮೆಗೆ ಬಿಜೆಪಿ ಒತ್ತಾಯಿಸಿದೆ. ಇದರ ನಡುವೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಇಂದು ಮೃತ ಸಚಿನ್ ನಿವಾಸಕ್ಕೆ ಭೇಟಿ ನೀಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದ್ದಾರೆ.
ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದಲ್ಲಿರುವ ಸಚಿನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಸಚಿನ್ ಕುಟುಂಬಸ್ಥರಿಗೆ 10 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಸರಕಾರ ಹಾಗೂ ಖಾಸಗಿಯಾಗಿ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು. ನಿಮ್ಮ ಕುಟುಂಬದ ಜೊತೆಗೆ ನಾನಿದ್ದೇನೆ ನಿಮಗೆ ನ್ಯಾಯ ಕೊಡಿಸುವೆ ಎಂದು ಕುಟುಂಬಸ್ಥರಿಗೆ ಭರವಸೆ ಕೊಟ್ಟಿದ್ದಾರೆ.
ಸಚಿನ್ ಕುಟುಂಬಸ್ಥರ ಭೇಟಿ ಬಳಿಕ ಮಾಧ್ಯಮಗಳಿಗೆ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ರು. ಸಚಿನ್ ಆತ್ಮಹತ್ಯೆ ಅತ್ಯಂತ ನೋವಿನ ಸಂಗತಿ. ಇಂತಹ ಘಟನೆ ನಡೆಯಬಾರದಿತ್ತು. ನಾನು ಹಾಗೂ ನಮ್ಮ ಸರಕಾರ ಸಚಿನ್ ಕುಟುಂಬಸ್ಥರ ಪರವಾಗಿ ನಿಂತಿದ್ದೇವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಗ್ಗೆ ಯಾವುದೇ ಅನುಮಾನ ಬೇಡ. ನ್ಯಾಯಯುತವಾಗಿ ತನಿಖೆ ನಡೆಸಲಾಗುತ್ತದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆದ್ರೂ ಕ್ರಮ ಜರುಗಿಸಲಾಗುವುದು ಎಂದರು.
ಸಚಿನ್ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಹಿರಿಯ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಯುತ್ತಿದೆ. ಕರ್ತವ್ಯಲೋಪ ಕಂಡು ಬಂದರೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಐಸಿಸಿ ಟಿ-20 ವರ್ಷದ ಕ್ರಿಕೆಟಿಗ ಪ್ರಶಸ್ತಿ – ಆಸೀಸ್ನ ಟ್ರಾವಿಸ್ ಹೆಡ್ ಜೊತೆ ಭಾರತೀಯ ಆಟಗಾರನ ಫೈಟ್!