ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಮಿಷನರ್ ಮನ್ಸೂರ್ ಅಲಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮುಡಾ ಕಮಿಷನರ್ ಮನ್ಸೂರ್ ಅಲಿ ಟಿಡಿಆರ್ ಕ್ಲಿಯರೆನ್ಸ್ ಮಾಡಲು 25 ಲಕ್ಷ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ಡಿವೈಎಸ್ಪಿ ಚೆಲುವರಾಜ್, ಇನ್ಸ್ಪೆಕ್ಟರ್ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ಕಮಿಷನರ್ ಮನ್ಸೂರ್ ಅಲಿಯನ್ನು ರೆಡ್ ಆ್ಯಂಡ್ ಆಗಿ ನಿನ್ನೆ ವಶಕ್ಕೆ ಪಡೆದುಕೊಂಡಿದ್ದಾರೆ.
ಕಮಿಷನರ್ ಮನ್ಸೂರ್ ಅಲಿ ಜೊತೆ ಬ್ರೋಕರ್ ಸಲೀಂ ಎಂಬುವವರನ್ನು ಕೂಡ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಾಗರ್ ರಿಯಾಲಿಟಿ ಪ್ರಮೋಟರ್ಸ್‌ನ ಮಾಲಕ ಗಿರಿಧರ್ ಶೆಟ್ಟಿ ಎಂಬವರಿಂದ ಮುಡಾ ಕಮಿಷನರ್ ಮನ್ಸೂರ್ ಅಲಿ ಬ್ರೋಕರ್ ಸಲೀಂ ಎಂಬಾತನ ಮುಖಾಂತರ 25 ಲಕ್ಷ ರೂ. ಲಂಚ ಸ್ವೀಕರಿಸುವಾಗಲೇ ದಾಳಿ ನಡೆಸಿದ್ದರು. ನಗರದ ಮಂಗಳಾ ಕ್ರೀಡಾಂಗಣದ ಬಳಿ ಲಂಚ ಸ್ವೀಕರಿಸುವ ವೇಳೆಯೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, 25 ಲಕ್ಷ ರೂ.ಸಮೇತ ಮುಡಾ ಕಮಿಷನರ್ ಮತ್ತು ಬ್ರೋಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಮಂಗಳೂರಿನಲ್ಲಿ ಬೃಹತ್ ಟಿಡಿಆರ್ ಹಗರಣ ಬಯಲಿಗೆ : ಈ ಘಟನೆಯ ಬಳಿಕ ಮಂಗಳೂರಿನಲ್ಲಿ ಬೃಹತ್ ಟಿಡಿಆರ್ ಹಗರಣ ಬಯಲಾಗಿದ್ದು, ಮೂಡಾ ಆಯುಕ್ತ ಮನ್ಸೂರ್ ಅಲಿ ಬಂಧನದಿಂದ ಬಯಲಿಗೆ ಬಂದಿದೆ. ರಿಯಲ್ ಎಸ್ಟೇಟ್ ಲಾಬಿಯ ಟಿಡಿಆರ್ ದಂಧೆ ಕಮಿಷನರ್ ಮನ್ಸೂರ್ ಅಲಿ ಬಂಧನದ ಹಿಂದಿದೆ ಎಂದು ಹೇಳಲಾಗುತ್ತಿದೆ.
ರಿಯಲ್ ಎಸ್ಟೇಟ್ ಕಿಂಗ್ ಗಿರಿಧರ ಶೆಟ್ಟಿಯವರು ಮಂಗಳೂರಿನ ಡಂಪಿಂಗ್ ಯಾರ್ಡ್ ಬಳಿ 10.8 ಎಕರೆ ನಿರುಪಯೋಗಿ ಜಮೀನು ಅಗ್ಗದ ಬೆಲೆಗೆ ಖರೀದಿಸಿದ್ದರು. ಗಿರಿಧರ ಶೆಟ್ಟಿ ಜಮೀನಿನ ಮೂಲ ಮಾಲೀಕರ ಜೊತೆ ಅಗ್ರಿಮೆಂಟ್ ಹಾಕಿಕೊಂಡಿದ್ದರು. ಗಿರಿಧರ ಶೆಟ್ಟಿ ಭೂಮಿ ಅಗ್ರಿಮೆಂಟ್ ಮಾಡಿಕೊಂಡ ಬೆನ್ನಲ್ಲೆ ಮಹಾನಗರ ಪಾಲಿಕೆಯಿಂದ ಟಿಡಿಆರ್ ನಿಯಮದಲ್ಲಿ ಖರೀದಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಗೆ ಗಿರಿಧರ ಶೆಟ್ಟಿಯ ಅಗ್ಗದ ಜಮೀನನ್ನು ಕೋಟ್ಯಾಂತರ ರೂಗೆ ಟಿಡಿಆರ್ ಖರೀದಿಸಿದೆ. ಟಿಡಿಆರ್ ಕ್ಲೀಯರೆನ್ಸ್ ಗೆ ಬ್ರೋಕರ್ ಸಲೀಂ ನಗರದ ಮಂಗಳಾ ಕ್ರೀಡಾಂಗಣದ ಬಳಿ ಹಣ ಪಡೆದಾಗ ಲೋಕಾಯುಕ್ತ ದಾಳಿ ನಡೆಸಿತ್ತು.
ಕೋಟ್ಯಾಂತರ ಬೆಲೆಯ ಟಿಡಿಆರ್ ಹಗರಣ ನಡೆಸಿದ ಮಹಾನಗರ ಪಾಲಿಕೆ ಅಧಿಕಾರಿಗಳ ಮೇಲೆ ಕ್ರಮ ಯಾಕಿಲ್ಲ? 10.8 ಎಕರೆ ನಿರುಪಯೋಗಿ ಜಮೀನನ್ನು ದೂರುದಾರರು ಖರೀದಿ ಮಾಡಿದ್ದು ಯಾವಾಗ? ಗಿರಿಧರ ಶೆಟ್ಟಿ ಖರೀದಿ ಮಾಡಿದಾಗ ಪಾವತಿಸಿದ ಮೌಲ್ಯ ಎಷ್ಟು? ಈಗ ನಗರ ಪಾಲಿಕೆ ಆ ಜಮೀನಿಗೆ ನೀಡಲು ಒಪ್ಪಿರುವ ಟಿ.ಡಿ.ಆರ್ ಮೌಲ್ಯ ಎಷ್ಟು? ಜಮೀನು ಖರೀದಿಸುವ ಮೊದಲೇ ಮಹಾನಗರ ಪಾಲಿಕೆಯಿಂದ ಟಿಡಿಆರ್ ಖರೀದಿಸುವ ಡೀಲ್ ನಡೆದಿತ್ತೆ? ಗಿರಿಧರ ಶೆಟ್ಟಿ ಡಂಪಿಂಗ್ ಯಾರ್ಡ್ ಬಳಿ ಜಮೀನು ಖರೀದಿಸಿದ್ದೇಕೆ? ಮಹಾನಗರ ಪಾಲಿಕೆ ಅದನ್ನು ಕೋಟ್ಯಾಂತರ ಬೆಲೆಗೆ ಟಿಡಿಆರ್ ಅಡಿ ಖರೀದಿಸಿದ್ದೇಕೆ? ಎಂಬೆಲ್ಲಾ ಅನುಮಾನವನ್ನು ಹುಟ್ಟುಹಾಕಿವೆ. ಲೋಕಾಯುಕ್ತ ಪೊಲೀಸರೇ, ಮಂಗಳೂರು ಮಹಾನಗರ ಪಾಲಿಕೆಯ ಟಿಡಿಆರ್ ಹಗರಣವನ್ನೂ ತನಿಖೆ ನಡೆಸಿ, ಬ್ರೋಕರ್ ಗಳ ಜೊತೆಗೆ ರಿಯಲ್ ಎಸ್ಟೇಟ್ ಮಾಫಿಯಾವನ್ನೂ ಬಂಧಿಸಿ ಎನ್ನುವ ಕೂಗು ಇದೀಗ ಕೇಳಿಬರುತ್ತಿದೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಲಾರಿ-ಬೈಕ್ ನಡುವೆ ಭೀಕರ ಅಪಘಾತ : ಮಹಿಳೆ ಸಾ*ವು, ಎಎಸ್ಪಿ ಗನ್ಮ್ಯಾನ್ ಸ್ಥಿತಿ ಗಂಭೀರ..!