ಯುಗಾದಿ ಹಬ್ಬ ಹಿಂದೂಗಳ ಪಾಲಿನ ಮೊದಲ ಹಬ್ಬವಾಗಿದ್ದು,ಕ್ರೋದಿ ನಾಮ ಸಂವತ್ಸರದ ಶುಭ ದಿನ. ಹೀಗಾಗಿ ಯುಗಾದಿ ಹಬ್ಬವನ್ನು ಪ್ರತಿ ಮನೆಯಲ್ಲಿ ಬಹಳ ವೈಭವದಿಂದ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಸಮಾಜದ ಎಲ್ಲಾ ಕ್ಷೇತ್ರಗಳ ಜನರು ಹೊಸ ಬಟ್ಟೆಗಳನ್ನು ಧರಿಸಿ, ರುಚಿಕರವಾದ ಖಾದ್ಯಗಳನ್ನು ಸವಿಯುವ ಮೂಲಕ ದಿನವನ್ನು ಆನಂದಿಸುತ್ತಾರೆ.
2024 ರಲ್ಲಿ, ಯುಗಾದಿ ಹಬ್ಬವು ಏಪ್ರಿಲ್ 9 ರಂದು ಮಂಗಳವಾರ ಬಂದಿದೆ. ಪ್ರಮುಖವಾಗಿ ಈ ಹಬ್ಬವನ್ನು ಭಾರತದ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ಹೊಸ ವರ್ಷದ ಆರಂಭ ಎಂದು ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಈ ಹಬ್ಬವನ್ನು ಯುಗಾದಿ ಅಥವಾ ಉಗಾದಿ ಎಂದು ಕರೆಯಲಾಗುತ್ತದೆ. ದಕ್ಷಿಣ ಕನ್ನಡದ ಕೆಲ ಪ್ರದೇಶಗಳಲ್ಲಿ ಇದನ್ನು ಬಿಸು ಎಂದು ಕೂಡಾ ಕರೆಯಲಾಗುತ್ತದೆ. ಈ ಹಬ್ಬದ ದಿನದಂದು ಹೋಳಿಗೆ, ಒಬ್ಬಟ್ಟು ವಿಶೇಷ ಆಹಾರವಾಗಿದೆ. ಹಾಗೆಯೇ ಸುಖದ ಸಂಕೇತವಾಗಿ ಬೆಲ್ಲವನ್ನೂ ಹಾಗೂ ಕಷ್ಟ ಸಂಕೇತವಾಗಿ ಬೇವನ್ನೂ ಸಮನಾಗಿ ಸೇವನೆ ಮಾಡಲಾಗುತ್ತದೆ.
ಯುಗಾದಿ ಇತಿಹಾಸ :
ಯುಗಾದಿಯು ಎರಡು ಸಂಸ್ಕೃತ ಪದಗಳಿಂದ ಹುಟ್ಟಿಕೊಂಡಿದೆ: “ಯುಗ,” ವಯಸ್ಸನ್ನು ಸೂಚಿಸುತ್ತದೆ ಮತ್ತು “ಆದಿ,” ಅಂದರೆ ಪ್ರಾರಂಭ. ಹಿಂದೂ ಸಂಪ್ರದಾಯದಲ್ಲಿ, ಯುಗಾದಿಯನ್ನು ಬ್ರಹ್ಮ ದೇವರು ಪ್ರಪಂಚದ ಸೃಷ್ಟಿಯನ್ನು ಪ್ರಾರಂಭಿಸಿದ ದಿನವೆಂದು ಆಚರಿಸಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಗೆ ಮತ್ತು ಅದರ ಚಕ್ರಗಳಾದ ದಿನಗಳು, ವಾರಗಳು ಮತ್ತು ತಿಂಗಳುಗಳಿಗೆ ಕಾರಣವಾದ ದೇವತೆಯಾಗಿ ಬ್ರಹ್ಮನನ್ನು ಪೂಜಿಸಲಾಗುತ್ತದೆ. ಆದ್ದರಿಂದ, ಯುಗಾದಿಯು ಹಿಂದೂ ಪುರಾಣಗಳ ಪ್ರಕಾರ ಬ್ರಹ್ಮಾಂಡದ ಪ್ರಾರಂಭವನ್ನು ನೆನಪಿಸುತ್ತದೆ ಎಂದು ನಂಬಲಾಗಿದೆ. ಈ ಹಬ್ಬವು ವಸಂತ ಋತುವಿನ ಆರಂಭವನ್ನು ಸೂಚಿಸುತ್ತದೆ ಹಾಗೂ ರೈತರು ತಮ್ಮ ಫಸಲುಗಳನ್ನು ಕೊಯ್ಯುವ ಸಮಯ.
ಬೇವು-ಬೆಲ್ಲದ ಮಹತ್ವ :
ಯುಗಾದಿ ಹಬ್ಬ ಎಂದ ಕೂಡಲೇ ಆ ದಿನ ಬೇವು-ಬೆಲ್ಲ ಎರಡನ್ನೂ ಸೇವಿಸುತ್ತೇವೆ. ವಿಶೇಷ ಅರ್ಥವನ್ನೊಳಗೊಂಡಿರುವ ಬೇವು-ಬೆಲ್ಲವನ್ನು ಹಿಂದೂಗಳು ತಪ್ಪದೇ ಯುಗಾದಿ ಹಬ್ಬದಂದು ಸವಿಯುತ್ತಾರೆ. ಕರ್ನಾಟಕದಲ್ಲಿ ಬೇವು-ಬೆಲ್ಲವನ್ನು ತಿನ್ನುವುದು ಸಂಪ್ರದಾಯ. ಕಹಿಯಾದ ಬೇವು ಜೀವನದಲ್ಲಿ ಬರುವ ಕಷ್ಟ, ದುಃಖಗಳು, ತೊಡಕುಗಳನ್ನು ಪ್ರತಿಬಿಂಬಿಸಿದರೆ, ಸಿಹಿಯಾದ ಬೆಲ್ಲ ಜೀವನದಲ್ಲಿ ಬರುವ ಸಂತೋಷ ಸಂಭ್ರಮಗಳ ಸಂಕೇತವಾಗಿದೆ. ಯುಗಾದಿ ಹಬ್ಬದ ದಿನ ಬೇವು ಬೆಲ್ಲವು ಸಂಪ್ರದಾಯದ ಪ್ರಕಾರ ಸವಿದರೂ ಅದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬೇವು ಉತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು , ಔಷಧಿ ಉಪಯುಕ್ತ ಸಸ್ಯವಾಗಿದೆ.
ಹಳೆಯ ಕಹಿ ನೆನಪನ್ನು ಮರೆತು ಹೊಸತನ್ನು ಬಯಸುತ್ತಾ ಬೇವು-ಬೆಲ್ಲ ಸವಿದು ಸಾಗುವ ಕ್ಷಣ.. ನಾಡಿನ ಎಲ್ಲ ಜನತೆಗೆ. ಸಮಸ್ತ ಬಿಟಿವಿ ವೀಕ್ಷಕರಿಗೆ ಯುಗಾದಿ ಹಬ್ಬದ ಶುಭಾಶಯಗಳು.
ಇದನ್ನೂ ಓದಿ : ಕೋಲಾರ : ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಹಾಕಿದ ಗ್ರಾಮಸ್ಥರು..!