ಬೆಂಗಳೂರು : ಇಂದು ದೇಶದ 78ನೇ ಸ್ವಾತಂತ್ರೋತ್ಸವವನ್ನು ಭಾರತದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮವನ್ನು ಇಂದು ಬೆಂಗಳೂರಿನ ಮಾಣೆಕ್ ಷಾ ಪರೇಡ್ ಗ್ರೌಂಡ್ನಲ್ಲೂ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಇತ್ತೀಚಿನ ಬೆಳವಣಿಗೆಗಳ ಗಮನದಲ್ಲಿಟ್ಟುಕೊಂಡ ಖಾಕಿ ಭಾರಿ ಭದ್ರತೆ ಕೈಗೊಂಡಿದ್ದು, ಮೈದಾನದ ಸುತ್ತ ಪೊಲೀಸ್ ಸರ್ಪಗಾವಲು ಹಾಕಿದೆ.
ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಾಣೆಕ್ ಷಾ ಮೈದಾನ ತ್ರಿವರ್ಣದಿಂದ ಸಿಂಗಾರಗೊಂಡಿದೆ. ಗ್ರೌಂಡ್ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಪೊಲೀಸರು ಟೈಟ್ ಸೆಕ್ಯೂರಿಟಿ ಆಯೋಜಿಸಿದ್ದಾರೆ. ಡ್ರೋನ್ ಕ್ಯಾಮೆರಾಗಳ ಮೂಲಕ ಗ್ರೌಂಡ್ ಮೇಲೆ ನಿಗಾ ಇರಿಸಲಾಗಿದೆ. ಮಾಣೆಕ್ ಷಾ ಗ್ರೌಂಡ್ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳಿಂದ ಭದ್ರತೆ ಒದಗಿಸಲಾಗಿದೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಜನ ಆಗಮಿಸುವ ಹಿನ್ನಲೆ ಪೊಲೀಸರು ಮೈದಾನದ ಸುತ್ತ ಹದ್ದಿನ ಕಣ್ ಇಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸರು ಎರಡು ರೀತಿಯಲ್ಲಿ ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ.
9 ಮಂದಿ ಡಿಸಿಪಿ, 15 ಎಸಿಪಿ, 43 ಇನ್ಸ್ ಪೆಕ್ಟರ್, 110 ಸಬ್ ಇನ್ಸ್ ಪೆಕ್ಟರ್, 72 ಎಎಸ್ ಐ, 554 ಸಿಬ್ಬಂದಿಗಳು ಸಹಿತ 77 ಮಂದಿ ಮಹಿಳಾ ಸಿಬ್ಬಂದಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀರನ್ನು ಭದ್ರತೆಯಲ್ಲಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು 157 ಮಂದಿ ಸಿಬ್ಬಂದಿಗಳು ಮಫ್ತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ : 78ನೇ ಸ್ವಾತಂತ್ರ್ಯೋತ್ಸವ – ಕೆಂಪುಕೋಟೆಯಲ್ಲಿ ಇತಿಹಾಸ ಬರೆಯಲಿದ್ದಾರೆ ಪ್ರಧಾನಿ ಮೋದಿ..!