ಚೆನ್ನೈ: ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರತಿಜ್ಞೆ ಮಾಡಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸರ್ಕಾರದ ವಿರುದ್ಧ ಕೊಯಮತ್ತೂರಿನಲ್ಲಿ ವಾಗ್ದಾಳಿ ನಡೆಸಿದ ಅಣ್ಣಾಮಲೈ, ಧರಿಸಿದ್ದ ಶೂಗಳನ್ನು ತೆಗೆದು, ಡಿಎಂಕೆ ಸರ್ಕಾರವನ್ನು ಆಡಳಿತದಿಂದ ಕೆಳಗಿಳಿಸುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ಕೆಂಡ ಕಾರಿದ್ದಾರೆ.
ತಮಿಳುನಾಡಿನ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಅಪರಿಚಿತ ವ್ಯಕ್ತಿಗಳು ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಸಂಬಂಧ, ಸಂತ್ರಸ್ತೆ ಡಿ.24 ರಂದು ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ಪೊಲೀಸರು ಪ್ರಕರಣವನ್ನು ನಿಭಾಯಿಸಿದ ರೀತಿ ವಿರುದ್ಧ ಅಣ್ಣಾಮಲೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಸಂಕೇತವಾಗಿ ತಮ್ಮ ಮನೆಯ ಮುಂದೆ ಆರು ಬಾರಿ ಛಾಟಿ ಏಟನ್ನು ಹೊಡೆಸಿಕೊಳ್ಳಲಿದ್ದೇನೆ, ಜೊತೆಗೆ ಮುಂದಿನ 48 ದಿನಗಳವರೆಗೆ ನಾನು ಉಪವಾಸ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸಂಸ್ರಸ್ತೆಯ ಹೆಸರು, ಫೋನ್ ನಂಬರ್ ಮತ್ತು ಇತರೆ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ಅಣ್ಣಾಮಲೈ ತಮಿಳುನಾಡು ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಎಫ್‌ಐಆರ್ ಸೋರಿಕೆ ಮಾಡುವ ಮೂಲಕ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದೀರಿ. ಅಲ್ಲದೆ ಇದು ಆಕೆಯ ಪ್ರತಿಷ್ಠೆಗೂ ಕಳಂಕ ತಂದಿದೆ. ಹೀಗೆ ಎಫ್‌ಐಆರ್ ಸೋರಿಕೆ ಮಾಡಿದ್ದಕ್ಕೆ ಪೊಲೀಸರು ಮತ್ತು ಡಿಎಂಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದರು.
ಇದನ್ನೂ ಓದಿ : ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೋಟಿ ಡಿಮ್ಯಾಂಡ್? – ಕಾಂಟ್ರಾಕ್ಟರ್ ಸೂಸೈಡ್..!