ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಜೋರಾಗಿದೆ. ಮೊನ್ನೆ ಮೊನ್ನೆಯಷ್ಟೇ ಮೈಸೂರು, ಕರಾವಳಿಯಲ್ಲಿ ಕಮಲ ಕಹಳೆ ಮೊಳಗಿಸಿದ್ದ ಪ್ರಧಾನಿ ಮೋದಿ ಮತ್ತೆ ಕರುನಾಡಿನ ಪ್ರವಾಸ ಕೈಗೊಂಡಿದ್ದಾರೆ. ಈ ಬಾರಿ ಬೆಂಗಳೂರಿನ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿ ನಮೋ ಮತಬೇಟೆಗೆ ಧುಮಕಲಿದ್ದಾರೆ.
2024ರ ಲೋಕಸಭಾ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದು, ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ಸೇರಿದಂತೆ ಹಲವು ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಆಗಮಿಸುವ ಕುರಿತು ಮಹಾ ರಣತಂತ್ರ ನಡೆಸಿದೆ.
ಮೋದಿ ಮೇನಿಯಾಗೆ ಇಂದು ಮತ್ತೆ ಕರುನಾಡು ಸಾಕ್ಷಿಯಾಗಲಿದೆ. ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಮತಬೇಟೆ ನಡೆಸಲಿದ್ದಾರೆ. ಇಂದು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಡಬ್ಬಲ್ ಸಮಾವೇಶ ಇರಲಿದ್ದು, ಮೊದಲಿಗೆ ಚಿಕ್ಕಬಳ್ಳಾಪುರದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 3.50 ರಿಂದ 4.30ರವರೆಗೆ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ ಮೋದಿ ಮತಯಾಚನೆ ಮಾಡಲಿದ್ದಾರೆ. ಬಿಜೆಪಿ ನಾಯಕರು ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರನ್ನ ಸೇರಿಸುವ ಪ್ಲಾನ್ ಮಾಡಿದ್ದಾರೆ.
ಸಂಜೆ 5.15 ರಿಂದ 6.10ರ ವರೆಗೂ ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ, ಗ್ರಾಮಾಂತರ ಬಿಜೆಪಿ ಅಭ್ಯರ್ಥಿಗಳ ಪರ ಮೋದಿ ಮತಬೇಟೆ ಮಾಡಲಿದ್ದಾರೆ. ಬೆಂಗಳೂರಿನಲ್ಲೂ ಒಂದು ಲಕ್ಷಕ್ಕೂ ಅಧಿಕ ಸಾರ್ವಜನಿಕರನ್ನ ಸೇರಿಸಲು ರಾಜ್ಯ ಕೇಸರಿ ಪಡೆ ಪ್ಲಾನ್ ರೂಪಿಸಿದ್ದು, ಈ ಮೂಲಕ ರಾಜ್ಯದಲ್ಲಿ 28ಕ್ಕೆ 28 ಸೀಟ್ ಗೆಲ್ಲಲು ಬಿಜೆಪಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ.
ನಗರದಲ್ಲಿ ಮೋದಿ ಆಗಮನದ ಕಾರಣ ಭಾರೀ ಭದ್ರತೆಯನ್ನೂ ಮಾಡಿಕೊಳ್ಳಲಾಗ್ತಿದೆ. ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ವೀಕೆಂಡ್ನಲ್ಲಿ ಮೋದಿ ಬರ್ತಿರೋದು ಕಮಲ ಬಳಗಕ್ಕೆ ಹೊಸ ಹುರುಪು ತುಂಬೋ ವಿಶ್ವಾಸ ಮೂಡಿಸಿದೆ.
ಇಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ. ಈ ಹಿನ್ನಲೆ ವಾಹನ ಸವಾರರಿಗೆ ಅಡಚಣೆಯಾಗದಂತೆ ಸಂಚಾರಿ ಪೊಲೀಸರು ನಗರದ ಹನ್ನೊಂದು ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಿದ್ದಾರೆ.
ಈ ಮಾರ್ಗದಲ್ಲಿ ನೋ ಎಂಟ್ರಿ – ಪ್ಯಾಲೇಸ್ ರಸ್ತೆ, ಜಯಮಹಲ್, ರಮಣಮಹರ್ಷಿ ರಸ್ತೆ, ಮೌಂಟ್ ಕಾರ್ಮೆಲ್ ರಸ್ತೆ, ಜಯರಾಮ್ ರಸ್ತೆ, ಸಿ ವಿ ರಾಮನ್ ರಸ್ತೆ, ನಂದಿದುರ್ಗ ರಸ್ತೆ, ಮೇಖ್ರಿ ಸರ್ಕಲ್, ವಸಂತನಗರ, ಬಳ್ಳಾರಿ ರಸ್ತೆ ಮತ್ತು ತರಳಬಾಳು ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಲಿದೆ.
ಪರ್ಯಾಯ ಮಾರ್ಗ ಬಳಸಿ – ಸಿಎಂಐಟಿ ಜಂಕ್ಷನ್, ನ್ಯೂ ಬಿಇಎಲ್ ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಬಿಹೆಚ್ಇಎಲ್ ಜಂಕ್ಷನ್, ಹೆಬ್ಬಾಳ ಜಂಕ್ಷನ್, ಬಸವೇಶ್ವರ ಜಂಕ್ಷನ್ ಮೂಲಕ ಸಂಚರಿಸಲು ನಗರ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ : ಹದಗೆಟ್ಟ ಕಾನೂನು ಸುವ್ಯವಸ್ಥೆ : ಗೃಹಮಂತ್ರಿ ಪರಮೇಶ್ವರ್ ರಾಜೀನಾಮೆಗೆ ಜೆಡಿಎಸ್-ಬಿಜೆಪಿ ಪಟ್ಟು..!