ಬೆಂಗಳೂರು : ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳ ಬೆಲೆಯೂ ದುಬಾರಿಯಾಗಿದೆ. ಅದರಲ್ಲೂ ಈರುಳ್ಳಿ ಬೆಲೆ ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ ಹೊರತು ಕಡಿಮೆಯಾಗುತ್ತಿಲ್ಲ. ಈ ಬಾರಿ ಮಳೆ ಹೆಚ್ಚಾದ ಪರಿಣಾಮ ಈರುಳ್ಳಿಯ ಉತ್ಪಾದನೆಯಲ್ಲಿ ಭಾರೀ ಕುಸಿತವಾಗಿದ್ದು, ಬೆಲೆ ಗಗನಕ್ಕೇರಿದೆ.
ಕಳೆದ 2 ದಿನಗಳಿಂದ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ದರ ಏರಿಕೆಯಾಗುತ್ತಿದ್ದು, ಹೀಗೆ ಮುಂದುವರಿದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ 100ರೂ. ಆಗುವ ಎಲ್ಲ ಸಾಧ್ಯತೆಗಳಿವೆ. ಗುರುವಾರ ನಗರದ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಗರಿಷ್ಠ ಕೆಜಿಗೆ 70- 80ರೂ. ವರೆಗೆ ಮಾರಾಟವಾಗಿದೆ. ಇನ್ನು ಕೆಜಿಗೆ 40 ರೂಗೆ ಈರುಳ್ಳಿಯೂ ಸಿಗುತ್ತಿದೆ. ಆದರೆ ಇದು ತೀರಾ ಕಳಪೆ ಗುಣಮಟ್ಟದಿಂದ ಕೂಡಿವೆ.
ಈಗಾಗಲೇ ನಗರದ ಎಪಿಎಂಸಿಗೆ 100480 ಚೀಲ ಈರುಳ್ಳಿ ಬಂದಿದ್ದು, ಮಹಾರಾಷ್ಟ್ರದಿಂದ ಬಂದಿರುವ 8-10 ಲಾರಿ ಹಳೇ ದಾಸ್ತಾನಿನ ಈರುಳ್ಳಿ ಗುಣಮಟ್ಟದಿಂದ ಕೂಡಿದೆ. ಕ್ವಿಂಟಲ್‌ಗೆ ಗರಿಷ್ಠ 7200 ರೂ. ರಿಂದ 7500 ರೂ. ಬೆಲೆಯಲ್ಲಿ ಮಾರಟ ಮಾಡಲಾಗ್ತಿದೆ.
ಇನ್ನು ಕರ್ನಾಟಕದಿಂದ 500ಕ್ಕೂ ಹೆಚ್ಚು ಲಾರಿಗಳು ಬಂದಿದ್ದರೂ ಈರುಳ್ಳಿ ಮಾತ್ರ ತೀರಾ ಕಳಪೆ ಗುಣಮಟ್ಟಾಗಿದೆ. ಹಾಗಾಗಿ ಕ್ವಿಂಟಲ್‌ಗೆ ಕನಿಷ್ಠ 1500 ರೂ.ರಿಂದ ಗರಿಷ್ಠ 5500 ರೂ. ಗೆ ಮಾರಾಟ ಮಾಡಲಾಗ್ತಿದೆ. ಅಕ್ಟೋಬರ್ ತಿಂಗಳಲ್ಲಿ ಸುರಿದ ತೀವ್ರ ಮಳೆಯ ಪರಿಣಾಮ ರಾಜ್ಯದ ಈರುಳ್ಳಿ ಸಂಪೂರ್ಣ ನೆಲಕಚ್ಚಿದೆ. ಒಂದೆರಡು ದಿನಗಳಲ್ಲಿ ಬಳಸಬೇಕು, ಇಲ್ಲವಾದರೆ ಕೊಳೆತು ಹೋಗುತ್ತವೆ. ಹೀಗಾಗಿ ರಾಜ್ಯದ ಈರುಳ್ಳಿಗೆ ಬೆಲೆ ಕಡಿಮೆಯಿದೆ. ಬೇರೆ ರಾಜ್ಯದ ಈರುಳ್ಳಿಗೆ ಭಾರೀ ಬೇಡಿಕೆಯಿದೆ ಎಂದು ವರ್ತಕರು ತಿಳಿಸಿದ್ದಾರೆ. ಒಟ್ಟಾರೆ ಮುಂದಿನ 15 ದಿನಗಳಲ್ಲಿ ಈರುಳ್ಳಿ ಬೆಲೆ 100ರ ಗಡಿ ದಾಟುವ ಸಾಧ್ಯತೆಗಳಿದೆ.
ಇದನ್ನೂ ಓದಿ : ಎರಡೂವರೆ ವರ್ಷದ ಮಗು ಕಿಡ್ನ್ಯಾಪ್ ಕೇಸ್ – ಕೊನೆಗೂ ಪೋಷಕರ ಮಡಿಲು ಸೇರಿದ ಕಂದಮ್ಮ..!