ನವೆಂಬರ್ ತಿಂಗಳ ಬಹುನಿರೀಕ್ಷಿತ ಸಿನಿಮಾ ಭೈರತಿ ರಣಗಲ್. ಶಿವಣ್ಣ ನಟನೆಯ ಈ ಸಿನಿಮಾ ಹಲವು ಕಾರಣಗಳಿಂದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜ್ಕುಮಾರ್ ಸಿನಿಮಾವನ್ನು ನಿರ್ಮಿಸಿದ್ದು, ನರ್ತನ್ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಾಯಕರಾಗಿ ಅಭಿನಯಿಸಿದ್ದಾರೆ. ‘ಭೈರತಿ ರಣಗಲ್’ ಚಿತ್ರಕ್ಕಾಗಿ ಡಾ. ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ ‘ಅಜ್ಞಾತವಾಸ’ ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ.
ಈ ಲಿರಿಕಲ್ ವಿಡಿಯೋದಲ್ಲಿ ಲಾಯರ್ ಪಾತ್ರದ ಸುಳಿವು ನೀಡಲಾಗಿದೆ. ಜತೆಗೆ, ಈ ಹಾಡಿನ ಸಾಹಿತ್ಯದಲ್ಲಿ ಶಿವಣ್ಣನ ಗುಣಗಾನವೂ ಇದೆ. ನವೆಂಬರ್ 18ಕ್ಕೆ ಕನಕದಾಸ ಜಯಂತಿ ಇರುವುದರಿಂದ ಭೈರತಿ ರಣಗಲ್ ಚಿತ್ರಕ್ಕೆ ದೀರ್ಘ ವಾರಾಂತ್ಯದ ಪ್ರಯೋಜನ ದೊರಕಲಿದೆ. ಶಿವರಾಜ್ ಕುಮಾರ್ ಅಭಿಮಾನಿಗಳು ಸಾಕಷ್ಟು ಸಮಯದಿಂದ ಭೈರತಿ ರಣಗಲ್‌ಗೆ ಎದುರು ನೋಡುತ್ತಿದ್ದಾರೆ.
‘ಅಜ್ಞಾತವಾಸ’ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿರುವ ‘ಭೈರತಿ ರಣಗಲ್’ ಚಿತ್ರದ ಸೀಕ್ವೆಲ್ ಕೂಡ ಬರುತ್ತದೆ ಎಂದು ಮಾಹಿತಿ ಬಿಚ್ಚಿಟ್ಟಿದ್ದಾರೆ. “ಮಫ್ತಿ” ಚಿತ್ರದ “ಭೈರತಿ ರಣಗಲ್” ಪಾತ್ರ ಬಹಳ ಇಷ್ಟ.ನಿರ್ದೇಶಕ ನರ್ತನ್, “ಭೈರತಿ ರಣಗಲ್” ಚಿತ್ರದ ಕಥೆ ಹೇಳಿದರು. ನನಗೆ ಹಾಗೂ ನನ್ನ ಶ್ರೀಮತಿ ಗೀತಾ ಅವರಿಗೆ ಕಥೆ ಮೆಚ್ಚುಗೆಯಾಯಿತು. ನಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್ನಲ್ಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಅದ್ದೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಈ ಚಿತ್ರದಲ್ಲಿದ್ದು, ಚಿತ್ರ ಉತ್ತಮವಾಗಿ ಮೂಡಿಬರಲು ಅವರೆಲ್ಲರ ಸಹಕಾರ ಬಹುಮುಖ್ಯ. ಈ ಸಂದರ್ಭದಲ್ಲಿ ನಾನು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ದೀಪಾವಳಿ ಹಾಗೂ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ‘ಅಜ್ಞಾತವಾಸ’ ಹಾಡು ಬಿಡುಗಡೆಯಾಗಿದೆ. ನವೆಂಬರ್ 15 ರಂದು ಚಿತ್ರ ತೆರೆಗೆ ಬರಲಿದೆ. ಮುಂದೆ ಈ ಚಿತ್ರದ ಮುಂದಿನ ಭಾಗ ಸಹ ಬರಲಿದೆ ಎಂದರು.
ಇನ್ನು ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ನೀಡಿದ ಗೀತಾ ಶಿವರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಕಥೆಗೆ ಶಿವಣ್ಣ ಸೇರಿದಂತೆ ಎಲ್ಲಾ ಕಲಾವಿದರು ಜೀವ ತುಂಬಿದ್ದಾರೆ. ತಂತ್ರಜ್ಞರು ಸಹಕಾರ ನೀಡಿದ್ದಾರೆ. ಎಲ್ಲರ ಶ್ರಮದಿಂದ “ಭೈರತಿ ರಣಗಲ್” ಉತ್ತಮ ಚಿತ್ರವಾಗಿ ನಿಮ್ಮ ಮುಂದೆ ಬರಲಿದೆ. ನವೆಂಬರ್ 5 ರಂದು ಟ್ರೇಲರ್ ಬರಲಿದೆ. ಚಿತ್ರ ನವೆಂಬರ್ 15ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಹಾರೈಸಿ ಎಂದು ನಿರ್ದೇಶಕ ನರ್ತನ್ ತಿಳಿಸಿದರು.
ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ ಮಾತನಾಡಿ, ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡಲು ನೀವೆಲ್ಲರೂ ಬಂದಿರುವುದು ಬಹಳ ಖುಷಿಯಾಗಿದೆ. ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ನವೆಂಬರ್ 15 ಚಿತ್ರ ಬಿಡುಗಡೆಯಾಗುತ್ತಿದೆ. “ಭೈರತಿ ರಣಗಲ್” ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು.
ಒಟ್ಟಾರೆ ‘ಅಜ್ಞಾತವಾಸ’ ಹಾಡಿನ ಮೂಲಕ ಅಭಿಮಾನಿಗಳಲ್ಲಿ ಭೈರತಿ ರಣಗಲ್ ಸಿನಿಮಾದ ಕುರಿತು ಚಿತ್ರತಂಡ ಕುತೂಹಲ ಹೆಚ್ಚಿಸಿದೆ. ಈ ಹಾಡಿಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ಗಳನ್ನು ಮಾಡಿದ್ದು, ಶಿವಣ್ಣನ ಸಿನಿಮಾಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. “ಜನುಮದ ಜೋಡಿ ಸಿನಿಮಾದಲ್ಲಿ ಮತ್ತು ಜೋಗಿಯಲ್ಲಿ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿತ್ತು ಅದೇ ತರಹ ರಣಗಲ್ನಲ್ಲೂ ಕೂಡ ಎಲ್ಲಾ ಹಾಡುಗಳು ವಿಭಿನ್ನವಾಗಿ ತುಂಬಾ ಅದ್ಬುತವಾಗಿ ಇದೆ. ರಣಗಲ್ ಈ ವರ್ಷದ ಒಂದು ಒಳ್ಳೆ ಸಿನಿಮಾ ಆಗೋದರಲ್ಲಿ ಯಾವುದೇ ಅನುಮಾನ ಇಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
“ಇತ್ತೀಚಿಗೆ ಶುದ್ಧವಾದ ಕನ್ನಡ ಸಾಹಿತ್ಯ ಮರೆಯಾಗಿ ಹೋಗಿದೆ ಚಿತ್ರಗಳಲ್ಲಿ ಆದರೆ, ನಮ್ಮ ಭೈರತಿ ರಣಗಲ್ ನ ಎಲ್ಲ ಹಾಡುಗಳು ಅಚ್ಚ ಕನ್ನಡದಲ್ಲಿಯೇ ಮೂಡಿ ಬಂದಿವೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. “ರಣಗಲ್ ಸಿನಿಮಾದ ಎಲ್ಲಾ ಹಾಡುಗಳು ತುಂಬಾ ಅರ್ಥಗರ್ಭಿತವಾಗಿವೆ. ಸಿನಿಮಾ ಹಿಟ್ ಆಗುವುದರಲ್ಲಿ ಸಂದೇಹವೇ ಇಲ್ಲ. ಜೈ ಶಿವಣ್ಣ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ನೂರಾರು ಕಾಮೆಂಟ್‌ಗಳ ಮೂಲಕ ಈ ಹಾಡಿನ ಕುರಿತು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಸಾಲು ಸಾಲು ಪಟಾಕಿ ಅವಘಡ – ಮೂರು ದಿನದಲ್ಲಿ 94 ಜನರ ಕಣ್ಣಿಗೆ ಹಾನಿ..!