ಬಿಬಿಎಂಪಿ ಸಹಾಯಕ ಆಯುಕ್ತ ಬಸವರಾಜ ಮಗಿ ಸಸ್ಪೆಂಡ್ ಆಗಿದ್ದಾರೆ. ಮಹಾದೇವಪುರ ವಲಯದಲ್ಲಿ ಸಹಾಯಕ ಆಯುಕ್ತರಾಗಿರುವ ಬಸವರಾಜ ಮಗಿ ಮೇಲೆ ಲೋಕಾಯುಕ್ತ ದಾಳಿ ಮಾಡಿತ್ತು. ಲೋಕಾಯುಕ್ತ ದಾಳಿ ವೇಳೆ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿತ್ತು.ಈ ಹಿನ್ನೆಲೆಯಲ್ಲಿ BBMP ಅಮಾನತಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಮುಖ್ಯ ಆಯುಕ್ತರಿಂದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದೀಗ ನಗರಾಡಳಿತ ಇಲಾಖೆ ಬಸವರಾಜ ಮಗಿಯನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ :
ಇದೇ ವರ್ಷ ಜುಲೈ 11ರಂದು ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು ಸೇರಿ ಒಟ್ಟು 9 ಜಿಲ್ಲೆಗಳಲ್ಲಿ 56 ಕಡೆ ರೇಡ್ ಮಾಡಿದ್ದರು. ಇದರಲ್ಲಿ ಅಪಾರ ಪ್ರಮಾಣದ ಬೇನಾಮಿ ಆಸ್ತಿ ಸಂಪಾದನೆ ಆರೋಪದ ಹಿನ್ನಲೆಯಲ್ಲಿ ಮಹದೇವಪುರ ವಲಯದ ಬಿಬಿಎಂಪಿ ಸಹಾಯಕ ಆಯುಕ್ತ ಬಸವರಾಜ ಮಗಿಗೆ ಸಂಬಂಧಿಸಿದ ಹಲವೆಡೆ ದಾಳಿ ನಡೆಸಲಾಗಿತ್ತು. ಈ ವೇಳೆ ಸಿಕ್ಕ ಸಂಪತ್ತು ನೋಡಿ ಲೋಕಾಯುಕ್ತಾ ಅಧಿಕಾರಿಗಳೇ ಒಂದು ಕ್ಷಣ ದಂಗಾಗಿದ್ದರು.
ಬಸವರಾಜ ಮಗಿಗೆ ಸಂಬಂಧಿಸಿದ 9 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಲ್ಲಿ 5 ಹಾಗೂ ಕಲಬುರಗಿಯಲ್ಲಿ 4 ಕಡೆ ಪರಿಶೀಲನೆ ನಡೆಸಲಾಗಿತ್ತು. ಬೆಂಗಳೂರಿನಲ್ಲಿ ಮೋತಿ ಅಪಾರ್ಟ್‌ಮೆಂಟ್, ಕುಮಾರ್ ಪಾರ್ಕ್ ಪೂರ್ವ, ಬಿಬಿಎಂಪಿ ಕಚೇರಿ, ಮಹದೇವಪುರ, ರಾಯಲ್ ವಿಸ್ತಾರಾ ಅಪಾರ್ಟ್‌ಮೆಂಟ್ ಇನ್ನು ಹಲವೆಡೆ ಅಧಿಕಾರಿಗಳು ಸರ್ಚ್ ಮಾಡಿದ್ದರು.
ರೇಡ್ ವೇಳೆ ಬಸವರಾಜ ಮಗಿ ಕುಮಾರಕೃಪ ಬಳಿಯ ಅಪಾರ್ಟ್‌ಮೆಂಟ್ ನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ಆರ್ ಆರ್ ನಗರ ನಡೆದಿದ್ದ ಖಾತಾ ವರ್ಗಾವಣೆ ಅಕ್ರಮದ ಬಸವರಾಜ ಪ್ರಮುಖ ರೂವಾರಿಯಾಗಿದ್ದರೆಂಬ ಆರೋಪ ಕೂಡ ಕೇಳಿ ಬಂದಿತ್ತು. ಇನ್ನು ಪರಿಶೀಲನೆ ವೇಳೆ ಬಸವರಾಜ್ ಮಾಗಿ ಮನೆಯಲ್ಲಿ ಎರಡು ಹುಲಿ ಉಗುರು ಪತ್ತೆಯಾಗಿತ್ತು. ಅದರಂತೆ ಮನೆಯ ಇಂಚಿಂಚು ಜಾಲಾಡಿ ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.