ದೇಶಾದ್ಯಂತ ನವರಾತ್ರಿ ಸಂಭ್ರಮ ಜೋರಾಗಿದೆ. ದುರ್ಗಾ ಪೂಜೆಯ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಅಲ್ಲಿನ ಸರ್ಕಾರವು 4 ದಿನಗಳ ರಜೆಯನ್ನು ಘೋಷಿಸಿದೆ. ಇಡೀ ದೇಶವೇ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿದೆ. ಮತ್ತೊಂದೆಡೆ, ಬಾಂಗ್ಲಾದೇಶದ ಸತ್ಖಿರಾ ನಗರದ ಶ್ಯಾಮನಗರದಲ್ಲಿರುವ ಪ್ರಸಿದ್ಧ ಜೇಶೋರೇಶ್ವರಿ ಕಾಳಿ ದೇವಸ್ಥಾನದ ಚಿನ್ನದ ಕಿರೀಟವನ್ನು ಕಳವು ಮಾಡಲಾಗಿದೆ.
ಈ ಕಳ್ಳತನದ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ದಾಖಲಾಗಿದೆ. ಅದರಲ್ಲಿ ಯುವಕನೊಬ್ಬ ಚಿನ್ನದ ಕಿರೀಟವನ್ನು ಹೊತ್ತಿರುವ ದೃಶ್ಯಗಳು ಸೆರೆಯಾಗಿದೆ. ಕಳವಾದ ಚಿನ್ನದ ಕಿರೀಟವನ್ನು ಪ್ರಧಾನಿ ನರೇಂದ್ರ ಮೋದಿ ಕಾಣಿಕೆಯಾಗಿ ಜೇಶೋರೇಶ್ವರಿ ಕಾಳಿ ದೇವಿಗೆ ನೀಡಿದ್ದರು.
ಹೌದು.. ಪ್ರಧಾನಿ ಮೋದಿ ಅವರು 2021 ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ, ಅವರು ಈ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದ್ದರು. ಈ ವೇಳೆ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಲಾಗಿತ್ತು. ಆದರೆ, ಈಗ ದುರ್ಗಾ ಪೂಜೆಯ ವಿಶೇಷ ಸಂದರ್ಭದಲ್ಲಿ ಈ ಕಿರೀಟವನ್ನು ಖತರ್ನಾಕ್ ಕಳ್ಳರು ಕದ್ದು ಹೊತ್ತೊಯ್ದಿದ್ದಾರೆ.
ಗುರುವಾರ ಮಧ್ಯಾಹ್ನ 2:47 ರಿಂದ 2:50 ರ ನಡುವೆ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಅರ್ಚಕ ದಿಲೀಪ್ ಕುಮಾರ್ ಬ್ಯಾನರ್ಜಿ ದೈನಂದಿನ ಪೂಜೆಯನ್ನು ಪೂರ್ಣಗೊಳಿಸಿದ ನಂತರ, ದೇವಾಲಯದ ಬೀಗಗಳನ್ನು ನಿರ್ವಹಣೆ ಮಾಡುವ ವ್ಯಕ್ತಿಗೆ ನೀಡಿದ್ದರು. ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿ ಬೇರೆ ಕೆಲಸದಲ್ಲಿ ಬ್ಯುಸಿಯಿದ್ದ. ಈ ವೇಳೆ ಕಾಳಿ ಮಾತೆಯ ಚಿನ್ನದ ಕಿರೀಟ ಕಾಣೆಯಾಗಿದೆ. ಈ ವಿಷಯವನ್ನು ಕೂಡಲೇ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಆಯುಧ ಪೂಜೆಯಂದೇ ಯದುವಂಶಕ್ಕೆ ಸಿಹಿ ಸುದ್ದಿ – ಎರಡನೇ ಮಗುವಿಗೆ ಜನ್ಮ ನೀಡಿದ ರಾಣಿ ತ್ರಿಷಿಕಾ ಕುಮಾರಿ..!