ಬೆಂಗಳೂರು : ಕನ್ನಡಿಗರ ಮನಗೆದ್ದಿದ್ದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಜು.11ರಂದು ಚಿರನಿದ್ರೆಗೆ ಜಾರಿದ್ದಾರೆ. ಕಳೆದ 2 ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಕನ್ನಡ ಸಿನಿ ರಂಗದ ನಟ-ನಟಿಯರು, ಚಿತ್ರರಂಗದ ಆಪ್ತರು, ರಾಜಕೀಯ ನಾಯಕರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.
ಇನ್ನು, ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಇಂದು (ಜು.12) ಅಪರ್ಣಾ ಅವರ ಅಂತ್ಯಕ್ರಿಯೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ. ಬನಶಂಕರಿಯಲ್ಲಿರುವ ಅಪರ್ಣಾ ಸ್ವಗೃಹದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಯ ಬಳಿಕ ಹೊಯ್ಸಳ ಕರ್ನಾಟಕ ಭಾಗದ ಆಚರಣೆಯಂತೆ ಅಂತಿಮ ವಿಧಿ ವಿಧಾನ ನಡೆಯಲಿದೆ.
ಈಗಾಗಲೇ ಅಪರ್ಣಾ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬನಶಂಕರಿ 2ನೇ ಹಂತದ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಟ-ನಟಿಯರು, ನಿರ್ದೇಶಕರು, ಗಾಯಕಿಯರು ಸೇರಿ ಹಲವರು ಅಂತಿಮ ದರ್ಶನ ಪಡೆದಿದ್ದಾರೆ.
ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಅಂತೆಯೇ ಕನ್ನಡದ ಯಶಸ್ವಿ ನಿರೂಪಕಿಯಾಗಿ 3 ದಶಕಗಳನ್ನು ಪೂರೈಸಿದ್ದಾರೆ.
ಇದನ್ನೂ ಓದಿ : ಮಸಣದ ಹೂವಿಂದ ಮಜಾ ಟಾಕೀಸ್‌ವರೆಗೆ.. ಬಾಲನಟಿಯಾಗಿ ಬಂದು ಬಹು ಕಲಾ ವಲ್ಲಭೆಯಾದ ಅಪರ್ಣಾ..!