ಬೆಂಗಳೂರು : ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಶಾಕ್ ಎದುರಾಗಿದೆ. ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಟ್ರಯಲ್ ಪ್ರಾರಂಭಿಸಲು ಎಸ್ಐಟಿ ಮುಂದಾಗಿದೆ ಎಂದು ತಿಳಿದುಬಂದಿದ್ದು, ಜಾಮೀನು ಸಿಗದೇ ಜೈಲಿನಲ್ಲಿ ಇರೋ ಪ್ರಜ್ವಲ್ಗೆ ಮತ್ತೆ ಸಂಕಷ್ಟ ಶುರುವಾಗಿದೆ.
ಎಸ್ಐಟಿ ತಂಡ ಇಂದು ಪ್ರಜ್ವಲ್ ರೇವಣ್ಣ ವಿರುದ್ಧ ಚಾರ್ಜ್ಫ್ರೇಮ್ ಮಾಡಲಿದ್ದು, ಟ್ರಯಲ್ ಪ್ರಾರಂಭಿಸಲು ಮುಂದಾದಗಿದೆ. ಆರು ತಿಂಗಳ ಹಿಂದೆ ಬಂಧನವಾಗಿದ್ದ ಪ್ರಜ್ವಲ್ ರೇವಣ್ಣ ಅಂದಿನಿಂದಲೂ ಜೈಲಿನಲ್ಲಿ ಇದ್ದಾರೆ.
ಜಾಮೀನು ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಜಾ ಆಗಿದ್ದು, ಇಂದು ಚಾರ್ಜ್ ಪ್ರೇಮ್ ಮಾಡಿ ಟ್ರಯಲ್ ಪ್ರಾರಂಭ ಆಗಲಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಯಲದ ಮುಂದೆ ತನಿಖಾಧಿಕಾರಿಗಳು ಹಾಜರುಪಡಿಸಲಿದ್ದಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿ ದೋಷಾರೋಪ ಪಟ್ಟಿಯ ಮೇಲೆ ಟ್ರಯಲ್ ಪ್ರಾರಂಭವಾಗಲಿದ್ದು, ಜಾಮೀನು ಸಿಗುವ ಮುನ್ನ ಟ್ರಯಲ್ ಪಾರಂಭಿಸಲು ಎಸ್ಐಟಿ ಸಿದ್ಧತೆ ನಡೆಸಿದೆ.
ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದ ಪ್ರಜ್ವಲ್ : ಕಳೆದ ಅಕ್ಟೋಬರ್ 21ರಂದು ಪ್ರಜ್ವಲ್ ರೇವಣ್ಣ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಜ್ವಲ್ ರೇವಣ್ಣ ಒಂದು ಪ್ರಕರಣದಲ್ಲಿ ಜಾಮೀನು ಹಾಗೂ ಇನ್ನೆರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿದ್ದರೆ, ಸಿಐಡಿ ಸೈಬರ್ ಸೆಲ್‌ನಲ್ಲಿ ದಾಖಲಾಗಿದ್ದ 2 ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮೂರು ಅರ್ಜಿಗಳನ್ನು ವಜಾಗೊಳಿಸಿತ್ತು.
ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ..!