ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿ ಚಿನ್ನದ ವ್ಯಾಪಾರಿಗೆ 14 ಕೋಟಿ ರೂ. ವಂಚಿಸಿದ ಪ್ರಕರಣ ಸಂಬಂಧ ಆರೋಪಿ ಐಶ್ವರ್ಯ ಗೌಡಳ ಮನೆ ಮೇಲೆ ಬುಧವಾರ ಪೊಲೀಸರು ದಾಳಿ ನಡೆಸಿದ್ದು, ಆರೋಪಿಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಐಷರಾಮಿ ಕಾರುಗಳು, ಕೆಜಿ ಗಟ್ಟಲೆ ಬೆಳ್ಳಿ, ರಾಶಿ-ರಾಶಿ ದಾಖಲೆಗಳು ಪತ್ತೆಯಾಗಿವೆ.
ನಿನ್ನೆ ಬ್ಯಾಟರಾಯನಪುರ ಉಪ ವಿಭಾಗದ ACP ಭರತ್ ರೆಡ್ಡಿ ನೇತೃತ್ವದಲ್ಲಿ ಐಶ್ವರ್ಯ ಗೌಡ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದು, ಈ ವೇಳೆ BMW, ಆಡಿ ಕಾರುಗಳು ಹಾಗೂ 29 ಕೆ.ಜಿ. ಬೆಳ್ಳಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆದರೆ, ವಂಚನೆ ಕೃತ್ಯಗಳು ಬಯಲಾದ ಬೆನ್ನಲ್ಲೇ ಎಚ್ಚೆತ್ತು ತನ್ನ ಮನೆಯಿಂದ ಬಂಗಾರದ ಒಡವೆಗಳನ್ನು ಸಾಗಿಸಿದ್ದಾಳೆ ಎನ್ನಲಾಗಿದೆ. ಹೀಗಾಗಿ 150 ಗ್ರಾಂ. ಮಾತ್ರ ಚಿನ್ನದ ಆಭರಣ ಸಿಕ್ಕಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರನ್ನು ಬಳಸಿಕೊಂಡು ಚಿನ್ನದ ವ್ಯಾಪಾರಿ ವನಿತಾ ಐತಾಳ್ ಅವರಿಗೆ 14 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚಿಸಿದ ಆರೋಪದ ಮೇರೆಗೆ ಐಶ್ವರ್ಯ ಗೌಡ ದಂಪತಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು, ಆರೋಪಿ ಮನೆ ಶೋಧನೆಗೆ ನಗರದ ಎಸಿಎಂಎಂ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದರು.
ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಹಾಗೂ ತಲಘಟ್ಟಪುರದಲ್ಲಿರುವ ಐಶ್ವರ್ಯ ಗೌಡಳಿಗೆ ಸೇರಿದ ಎರಡು ಮನೆಗಳ ಮೇಲೆ ಬುಧವಾರ ದಿಢೀರ್ ದಾಳಿ ನಡೆಸಿ ಪೊಲೀಸರು ತಪಾಸಣೆ ನಡೆಸಿದರು. ಆ ವೇಳೆ ಐಷಾರಾಮಿ ಕಾರುಗಳು ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.
ಇದನ್ನೂ ಓದಿ : ಸಿ.ಟಿ ರವಿ ಕೇಸ್ ಬಗ್ಗೆ ಮಹಜರ್ ಹೇಗೆ ಮಾಡ್ತೀರಿ? – ಸಿಐಡಿಗೆ ಪರಿಷತ್ ಸಚಿವಾಲಯದಿಂದ ಪತ್ರ..!