ಬೆಂಗಳೂರು : 2025ರ ಹೊಸ ವರ್ಷಕ್ಕೆ ದಿನಗಣನೇ ಶುರುವಾಗಿರುವ ಹೊತ್ತಿನಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ ಕೊಟ್ಟಿದ್ದಾರೆ. ಈ ವರ್ಷವೂ ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಯಶ್ ಹೇಳಿದ್ದಾರೆ. ಕೆಲಸದ ನಿಮಿತ್ತ ಊರಿನಲ್ಲಿ ಇರದ ಕಾರಣ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲ್ಲ ಎಂದಿದ್ದಾರೆ.
ಜನವರಿ 8ರಂದು ನಟ ಯಶ್ ಅವರ ಬರ್ತ್‌ಡೇ ದಿನ.. ಯಶ್ ಈ ಬಾರಿಯೂ ತಮ್ಮ ಹುಟ್ಟುಹಬ್ಬವನ್ನು ಫ್ಯಾನ್ಸ್ ಜತೆ ಆಚರಿಸಿಕೊಳ್ಳುತ್ತಿಲ್ಲ. ಈ ವರ್ಷವೂ ತನ್ನ ಹುಟ್ಟು ಹಬ್ಬ ಆಚರಣೆ ಇಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಯಶ್ ಅವರು ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ತಮ್ಮ ಜನ್ಮದಿನದಂದು ಆಡಂಬರ, ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕದಂತೆ ಕೋರಿದ್ದಾರೆ. ಯಶ್ ಅವರು 2018ರ ಬಳಿಕ ಇಲ್ಲಿಯವರೆಗೂ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿಲ್ಲ.
ನಟ ಯಶ್ ಪೋಸ್ಟ್ನಲ್ಲಿ ಏನಿದೆ..? ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ.
ನನ್ನ ಹುಟ್ಟುಹಬ್ಬಕ್ಕೆ ಫ್ಲೆಕ್ಸ್, ಬ್ಯಾನರ್ಗಳು ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ, ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ವರ್ಷ ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲಿ ನಟ ಯಶ್ ಹುಟ್ಟುಹಬ್ಬ ಪ್ರಯುಕ್ತ ಫ್ಲೆಕ್ಸ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶ ಆಗಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಹಾಗಾಗಿ ಈ ಬಾರಿ ಅಂತಹ ಯಾವುದೇ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ, ಅಂತಹ ಆಡಂಬರದ ಕಾರ್ಯಕ್ರಮಗಳು ಬೇಡವೆಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಇನ್ನು ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಜೊತೆಗೆ ನಿತೇಶ್ ತಿವಾರಿ ನಿರ್ದೇಶನದ ಬಾಲಿವುಡ್ ಚಿತ್ರ ರಾಮಾಯಣದಲ್ಲಿ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ : ಹೊಸ ವರ್ಷದ ಮೋಜು ಮಸ್ತಿಗೆ ಬ್ರೇಕ್.. ಶಿವಗಂಗೆ ಬೆಟ್ಟಕ್ಕೆ ನೋ ಎಂಟ್ರಿ!