ಒಡಿಶಾ : ವಿಶ್ವ ವಿಖ್ಯಾತ ಭಗವಾನ್ ಪುರಿ ಜಗನ್ನಾಥನ ಭವ್ಯ ರಥೋತ್ಸವಕ್ಕೆ ನಿನ್ನೆ ಅದ್ಧೂರಿ ಚಾಲನೆ ಸಿಕ್ಕಿದೆ. ಒಡಿಶಾ ರಾಜ್ಯ ಮಾತ್ರವಲ್ಲ ಇಡೀ ದೇಶವೇ ಕಾತುರದಿಂದ ಎದುರು ನೋಡುತ್ತಿರುವ ಪುರಿ ಜಗನ್ನಾಥ ರಥಯಾತ್ರೆ ಆರಂಭಗೊಂಡಿದೆ. ಈ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗಿಯಾಗಿದ್ದಾರೆ.
ಇನ್ನು ಪುರಿಯಲ್ಲಿ ನಡೆಯುವ ರಥಯಾತ್ರೆಯಲ್ಲಿ ನಿನ್ನೆ ದುರಂತವೊಂದು ಸಂಭವಿಸಿದೆ. ಹೌದು, ಪ್ರಸಿದ್ಧ ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾದ ಕಾರಣ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ ಮತ್ತು 300ಕ್ಕೂ ಹೆಚ್ಚು ಭಕ್ತಾದಿಗಳು ಗಾಯಗೊಂಡಿದ್ದಾರೆ.
ದೇವರ ರಥಯಾತ್ರೆಯಲ್ಲಿ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗಿಯಾಗಿದ್ದ ಪರಿಣಾಮ, ತಾಳಧ್ವಜ ರಥವನ್ನು ಎಳೆಯುವ ಹೊತ್ತಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಓರ್ವ ಭಕ್ತ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ ಹಲವಾರು ಭಕ್ತಾದಿಗಳಿಗೆ ಗಂಭೀರ ಗಾಯಗಳಾಗಿವೆ.
ಆ ಕೂಡಲೇ ಗಾಯಾಳುಗಳನ್ನು ಪುರಿ ಜಿಲ್ಲಾಸ್ಪತ್ರೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ. ಸುಮಾರು 50 ಮಂದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಶ್ಚಾರ್ಜ್ ಮಾಡಲಾಗಿದೆ. ಕಾಲ್ತುಳಿತದ ಬಳಿಕವೂ ರಥಯಾತ್ರೆಯು ಸುಗಮವಾಗಿ ಸಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಕೇರಳದಲ್ಲಿ ಮೆದುಳು ತಿನ್ನುವ ‘ಅಮೀಬಾ ವೈರಸ್’ಗೆ 3 ಬಲಿ – ರಾಜ್ಯದಲ್ಲೂ ಹೆಚ್ಚಿದ ಆತಂಕ, ಹೈ ಅಲರ್ಟ್ ಘೋಷಣೆ..!