ಕಿಚ್ಚ ಸುದೀಪ್, ಅಭಿಮಾನಿಗಳ ಹೃದಯ ಸಾಮ್ಯಾಜ್ಯದ ಅಭಿನಯ ಚಕ್ರವರ್ತಿ. ಕನ್ನಡವನ್ನೂ ಮೀರಿ ಬೆಳೆದು ಕಂಚಿನ ಕಂಠದಿಂದ ಕಂಗೊಳಿಸಿದ ಸ್ಟಾರ್. ಪರಭಾಷಾ ಸ್ಟಾರ್ ಸಿನಿಮಾಗಳು ಕಿಚ್ಚನನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿವೆ. ಅದರಲ್ಲೂ ಸುದೀಪ್ನಿಂದಾಗಿಯೇ ಪರಭಾಷಾ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ಡಬ್ ಆಗುತ್ತಿವೆ.
ಸೌತ್ ಇಂಡಿಯಾದಲ್ಲೊಂದು ಬಿಗ್ ಬಜೆಟ್ ಸಿನಿಮಾ ಕಿಚ್ಚನ ಕೈಯಲ್ಲಿದ್ದರೆ, ಬಾಲಿವುಡ್‍ನಲ್ಲೊಂದು ದೊಡ್ಡ ಸಿನಿಮಾ ಇದೆ. ಅಷ್ಟೇ ಯಾಕೆ ಹಾಲಿವುಡ್ ಕೂಡ ಕಿಚ್ಚ ‘ಯೂ ಆರ್ ವೆಲ್ಕಮ್’ ಅಂತ ಕೈಬೀಸಿ ಕರೀತಾ ಇದೆ. ಸುದೀಪ್ ಪರಭಾಷೆಯವರಿಗೆ ಲಕ್ಕಿ ಸ್ಟಾರ್.
ಕನ್ನಡದ ಸಿನಿ ರಸಿಕರಿಗೆ ಹೇಗೆ ತಮ್ಮ ಡಿಫರೆಂಟ್ ಪಾತ್ರಗಳಿಂದ ಪರಿಚಿತರೋ, ಹಾಗೆಯೇ ಭಾರತದ ವಿವಿಧ ಚಿತ್ರರಂಗಗಳಲ್ಲಿ ಖಡಕ್ ಪಾತ್ರಗಳಿಂದ ಸಖತ್ ಫೇಮಸ್. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಫೂಂಕ್’ ಚಿತ್ರದ ಮೂಲಕ ಬಾಲಿವುಡ್ಗೆ ಲಗ್ಗೆ ಇಟ್ಟ ಸುದೀಪ್, ಅಲ್ಲಿಂದ ವಿವಿಧ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನಲ್ಲಂತೂ ಕಿಚ್ಚನಿಗೆ ಬೇಡಿಕೆ ಬಹಳಷ್ಟಿದ್ದು, ಆಗಾಗ ಅಲ್ಲಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಿದೆ.
ಸ್ಯಾಂಡಲ್‍ವುಡ್ ಸಿನಿಮಾಗಳ ಜೊತೆಗೆ 2010ರಲ್ಲಿ ಬಿಡುಗಡೆಯಾದ ರಕ್ತಚರಿತ್ರಾ ಸಿನಿಮಾ ತೆಲುಗು ಹಾಗೂ ಹಿಂದಿಯಲ್ಲಿ ತೆರೆಕಂಡಿತ್ತು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ವಿವೇಕ್ ಒಬೆರಾಯ್, ರಾಧಿಕಾ ಆಪ್ಟೆ, ಶತ್ರುಘ್ನ ಸಿನ್ಹಾ ಜೊತೆ ಸುದೀಪ್ ತೆರೆ ಹಂಚಿಕೊಂಡಿದ್ದರು. ಇದರಲ್ಲಿ ಸುದೀಪ್ ಅಭಿನಯಕ್ಕೆ ಹಾಗೂ ಮ್ಯಾನರಿಸಂಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ನಂತ್ರ ಇದೇ 2010ರ ಜನವರಿಯಲ್ಲಿ ಇದೇ ರಾಮ್ ಗೋಪಾಲ್ ವರ್ಮಾ ಆ್ಯಕ್ಷನ್ ಕಟ್ ಹೇಳಿರೋ ‘ರಣ್’ ಸಿನಿಮಾ ರಿಲೀಸ್ ಆಯ್ತು.. ಇದ್ರಲ್ಲಿ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಮಗನ ಪಾತ್ರದಲ್ಲಿ ಸುದೀಪ್ ಸ್ಕ್ರೀನ್ ಶೇರ್ ಮಾಡುವ ಮೂಲಕ ಬಿಟೌನ್ ಮಂದಿಯ ಗಮನ ಸೆಳೆದಿದ್ರು.
ನಂತ್ರ 2012ರಲ್ಲಿ ಬಾಲಿವುಡ್ನಿಂದ ಟಾಲಿವುಡ್ಗೆ ಎಂಟ್ರಿ ಕೊಟ್ಟ ಕಿಚ್ಚ, ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಈಗ’ ಸಿನಿಮಾದಲ್ಲಿ ನಟಿಸಿ ತೆಲುಗು ಮಂದಿಯನ್ನ ಮೋಡಿ ಮಾಡಿದ್ರು. ಸುದೀಪ್‍ರನ್ನು ರಾಜಮೌಳಿ ಸೆಳೆದಿದ್ದೇ ಸೆಳೆದಿದ್ದು, ‘ಬಾಹುಬಲಿ’ಗೂ ಹೂವಿನ ಹಾದಿಯ ಸ್ವಾಗತ ಸಿಕ್ಕಿಯೇ ಬಿಟ್ಟಿತ್ತು. ಕನ್ನಡದಲ್ಲಿರೋ ದೊಡ್ಡ ಮಾರುಕಟ್ಟೆಗೆ ಲಗ್ಗೆ ಇಡೋಕೆ ಒಬ್ಬ ಕನ್ನಡದ ಸ್ಟಾರ್ ಬೇಕಿತ್ತು ಅನ್ನೋದು ಒಂದು ಕಡೆ ಇದ್ದರೂ, ಕಿಚ್ಚನನ್ನೇ ರಾಜಮೌಳಿಯಂತಹ ನಿರ್ದೇಶಕ ಮತ್ತೆ ಮತ್ತೆ ಆಯ್ಕೆ ಮಾಡಿಕೊಳ್ಳೋಕೆ ಕಾರಣ ಸುದೀಪ್ ಒಬ್ಬ ಸಕಲಕಲಾವಲ್ಲಭ. ಪೊಲೀಸ್ ಪಾತ್ರವಾದ್ರೂ ಸರಿ ಕಳ್ಳನ ಪಾತ್ರವಾದ್ರೂ ಸರಿ, ಐತಿಹಾಸಿಕ ಪಾತ್ರಕ್ಕೂ ಕಿಚ್ಚು ಹಚ್ಚಬಲ್ಲ ನಟ ಕಿಚ್ಚ ಸುದೀಪ್.
ಇನ್ನು ಬಾಲಿವುಡ್‌ನ ಯಶಸ್ವಿ ಸೀರೀಸ್ಗಳಲ್ಲಿ ಒಂದಾದ ‘ದಬಂಗ್ 3’ಯಲ್ಲಿ ಸುದೀಪ್, ಸಲ್ಮಾನ್ ಖಾನ್ ಎದುರು ಖಳನಾಯಕನಾಗಿ ಅಬ್ಬರಿಸಿದ್ದರು. ಬಾಕ್ಸಾಫೀಸ್ನಲ್ಲಿ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡೋ ಮೂಲಕ ಸಿನಿಪ್ರಿಯರನ್ನ ರಂಜಿಸಿತ್ತು. ಇದರ ಜೊತೆ ಜೊತೆಯಲ್ಲಿಯೇ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ‘ಅವುಕು ರಾಜು’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಹೀಗೆ ಸುದೀಪ್‍ರನ್ನು ಸೂಕ್ಷ್ಮವಾಗಿ ಗಮನಿಸಿದ ತಮಿಳು ಚಿತ್ರರಂಗ ಕೂಡ ಕಿಚ್ಚನನ್ನು ಸೂಪರ್ಸ್ಟಾರ್ ಇಳೆಯದಳಪತಿ ಎದುರು ವಿಲನ್ ಪಾತ್ರಕ್ಕೆ ಸಹಿ ಮಾಡಿಸಿಕೊಂಡಿದ್ದೂ ಆಯ್ತು. ಅಲ್ಲಿ ಸುದೀಪ್ ಸಿಂಹ ಘರ್ಜನೆಯ ಮುಂದೆ ಪುಲಿ ವಿಜಯ್ ಕೂಡ ದಂಗಾಗಿ ಹೋಗುವಂತಿತ್ತು. ಟೀಸರ್ ನೋಡಿದವರಿಗೆ ವಿಲನ್ ಕಿಚ್ಚನ ಮುಂದೆ ಹೀರೋ ವಿಜಯ್ ಡಮ್ಮಿಯಂತೆ ಕಂಡಿದ್ರು. ಅಷ್ಟೊತ್ತಿಗಾಗಲೇ ಹಿಂದಿಯಲ್ಲೂ ಛಾಪು ಮೂಡಿಸಿದ್ದ ಕಿಚ್ಚ, ತಮಿಳು ತೆಲುಗಿನಲ್ಲೂ ಚಿಂದಿ ಉಡಾಯಿಸಿದ್ರು. ಸಿಕ್ಕ ಅವಕಾಶವನ್ನು ಬಾಚಿಕೊಂಡರು. ನಂದಿ ಪ್ರಶಸ್ತಿ, ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಕಿಚ್ಚನ ಕಿರೀಟಕ್ಕೆ ಏರಿಬಿಟ್ವು. ಅದಾದ ಮೇಲೆ ಕಿಚ್ಚ ಪರಭಾಷೆಗಳಿಗೆ ಕನ್ನಡದ ರಾಯಭಾರಿ ತರ ಆಗಿಬಿಟ್ಟಿದ್ದಾರೆ.
ಈಗ ಕನ್ನಡದ ಮಾರುಕಟ್ಟೆಯನ್ನು ಕಬಳಿಸಬೇಕು ಅಂದರೆ ಕಿಚ್ಚ ಸುದೀಪ್‍ಗೆ ಒಂದು ಅದ್ಭುತ ಪಾತ್ರವನ್ನು ಕೊಡಬೇಕು ಅನ್ನೋ ಲೆಕ್ಕಾಚಾರ ನಡೆಯುತ್ತಿರುವಂತಿದೆ. ಸದ್ಯ ಬಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ.. ಅದು ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಜೊತೆ ಅಬ್ಬರಿಸಲಿದ್ದಾರಂತೆ ಅಭಿನಯ ಚಕ್ರವರ್ತಿ.. ಇದಕ್ಕೆ ಸಾಕ್ಷಿನೇ ಇತ್ತಿಚೆಗೆ ಅಮೀರ್ ಖಾನ್ ಜೊತೆ ಸುದೀಪ್ ಕ್ಲಿಕಿಸಿಕೊಂಡಿರೋ ಪೋಟೋ.. ಇದೊಂದು ಆ್ಯಕ್ಷನ್-ಥ್ರಿಲ್ಲರ್ ಸ್ಟೋರಿಯಾಗಿದ್ದು, ಡಿಫರೆಂಟ್ ಗೆಟಪ್ನಲ್ಲಿ ಸುದೀಪ್ ಹಾಗೂ ಅಮೀರ್ ಖಾನ್ ಮಿಂಚಲಿದ್ದಾರಂತೆ. 2025 ಮಾರ್ಚ್ನಲ್ಲಿ ಈ ಸಿನಿಮಾ ಸೆಟ್ಟೇರೋ ಸಾಧ್ಯತೆ ಇದೆಯಂತೆ.
ಒಟ್ಟಾರೆಯಾಗಿ ಸ್ಯಾಂಡಲ್‍ವುಡ್ ಬೆಳೆಯುತ್ತಿದೆ. ಕನ್ನಡ ಅಂದ್ರೆ ಎನ್ನಡ ಅಂತಿದ್ದ ಹಿಂದಿನ ಪರಿಸ್ಥಿತಿ ಈಗಿಲ್ಲ. ಪರಭಾಷೆಗಳು ಕನ್ನಡದ ಸ್ಟಾರ್ ನಟರಿಗೆ ಅದ್ದೂರಿ ಸ್ವಾಗತ ಕೋರುತ್ತಿವೆ. ಕನ್ನಡದ ಸ್ಟಾರ್ಗಳಿಗೆ ಪರಭಾಷೆಗಳಲ್ಲಿ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಅದರಲ್ಲೂ ಕಿಚ್ಚನ ಡಿಮಾಂಡ್ ಸ್ವಲ್ಪ ಜಾಸ್ತೀನೇ ಇದೆ. ಸುದೀಪ್‍ರನ್ನು ಬಳಸಿಕೊಂಡೇ ಕನ್ನಡದಲ್ಲಿ ಮಾರ್ಕೆಟ್ ಹಿಗ್ಗಿಸಿಕೊಳ್ಳೋಕೆ ಪರಭಾಷೆಯ ಸಿನಿಮಾಗಳೂ ಪ್ರಯತ್ನಿಸುತ್ತಿವೆ. ಮುಂದಿನ ದಿನಗಳಲ್ಲಿ ಸಲ್ಮಾನ್ ಖಾನ್, ಅಮೀರ್ ಖಾನ್ ರೀತಿ ಇನ್ ಯಾವ್ಯಾವ ಸ್ಟಾರ್ ಹೀರೋಗಳ ಜೊತೆ ಸುದೀಪ್ ಆರ್ಭಟಿಸುತ್ತಾರೆ ಅಂತ ಕಾದು ನೋಡಬೇಕಾಗಿದೆ.
ಇದನ್ನೂ ಓದಿ : KIADB ಚೀಫ್ ಇಂಜಿನಿಯರ್ ವೀರಭದ್ರಯ್ಯ ವಿರುದ್ಧ ಸಾವಿರಾರು ಕೋಟಿ ಭ್ರಷ್ಟಾಚಾರ ಆರೋಪ..!