ಬೆಂಗಳೂರು : ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಒಂದಲ್ಲ ಒಂದು ಅನಾಹುತ ನಡೆಯುತ್ತಲೇ ಇರುತ್ತದೆ. ಇದೀಗ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬೈಕ್ ಸವಾರನ ಮೇಲೆ ಮರದ ಕೊಂಬೆ ಬಿದ್ದು ಬೆನ್ನು ಮೂಳೆ ಮುರಿದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಾಗರಬಾವಿ ನಿವಾಸಿ ಚಂದನ್ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ.
ರಿಚ್ಮಂಡ್ ರಸ್ತೆಯ ಫೈನಾನ್ಸ್ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಮಾರ್ಚ್ 7 ರಂದು ಬೆಳಗ್ಗೆ ಮನೆಯಿಂದ ಕಚೇರಿಗೆ ಹೋಗುತ್ತಿದ್ದ. ಈ ವೇಳೆ ಸೆಕ್ರೆಡ್ ಹಾರ್ಟ್ ನರ್ಸರಿ ಶಾಲೆ, ಗೂಡ್ ಶಪರ್ಡ್ ಕಾನ್ವೆಂಟ್ನ ಕಾಂಪೌಂಡ್ ಒಳಗೆ ಇದ್ದ ಮರದ ಕೊಂಬೆ ದಿಢೀರನೆ ಬೈಕ್ ಸವಾರ ಮೇಲೆ ಮುರಿದು ಬಿದ್ದಿದೆ. ಕೊಂಬೆ ಬೀಳುತ್ತಿದ್ದಂತೆ ರಸ್ತೆ ಮೇಲೆ ಬಿದ್ದ ಬೈಕ್ ಸವಾರ ಏಳೆಂಟು ನಿಮಿಷಗಳ ಕಾಲ ರಸ್ತೆಯಲ್ಲಿ ನರಳಾಡಿದ್ದ. ಈ ಘಟನೆಯಿಂದ ಬೆನ್ನು ಮೂಳೆ ಮುರಿದುಕೊಂಡು ಹಾಸಿಗೆ ಹಿಡಿದಿರುವ ಚಂದನ್ ಕಳೆದ 14 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಮರದ ಕೊಂಬೆ ರಸ್ತೆಗೆ ಬೀಳುವಂತಿದ್ದರು ತೆರವು ಮಾಡದ ಕಾರಣ ಬೈಕ್ ಸವಾರ ಚಂದನ್ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಅಶೋಕನಗರ ಠಾಣೆಯ ಪೊಲೀಸರು ಖಾಸಗಿ ಶಾಲೆ ಹಾಗೂ ಬಿಬಿಎಂಪಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ : ನಾಯಕನಹಟ್ಟಿ ಚೆಕ್ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸ್ತಿದ್ದ 38 ಲಕ್ಷ ಹಣ ಜಪ್ತಿ..!