ಬೆಂಗಳೂರು : ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ಶಫಿ ನಾಶಿಪುಡಿಗೆ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 39ನೇ ACMM ಕೋರ್ಟ್ ಆದೇಶಿಸಿದೆ. ಪ್ರಕರಣ ಸಂಬಂಧ ಬಂಧಿತನಾಗಿದ್ದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಹಮ್ಮದ್ ಶಫಿ ನಾಶಿಪುಡಿಯನ್ನು ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಈ ಪ್ರಕರಣ ಸಂಬಂಧ ಇದೀಗ ಬೆಂಗಳೂರಿನ 39ನೇ ಎಸಿಎಂಎಂ ನ್ಯಾಯಾಲಯ ಆರೋಪಿ ನಾಶಿಪುಡಿಗೆ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಪ್ರಕರಣದ ಮೂವರು ಆರೋಪಿಗಳ ಪೈಕಿ ನಿನ್ನೆ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿತ್ತು.
ಏನಿದು ಪ್ರಕರಣ..?
ಕರ್ನಾಟಕದಿಂದ ರಾಜ್ಯಸಭೆಗೆ ಖಾಲಿಯಾಗಿದ್ದ 4 ಸ್ಥಾನಗಳಿಗೆ ಫೆಬ್ರವರಿ 27 ರಂದು ವಿಧಾನಸೌಧದಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಇಬ್ಬರು, ಕಾಂಗ್ರೆಸ್ನಿಂದ ಮೂವರು ರಾಜ್ಯಸಭಾ ಚುನಾವಣಾ ಕಣದಲ್ಲಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ನ ನಾಸೀರ್ ಹುಸೇನ್ ರಾಜ್ಯಸಭೆಗೆ ಆಯ್ಕೆ ಬೆನ್ನಲ್ಲೆ ವಿಧಾನಸೌಧದಲ್ಲಿ ಸೆಲೆಬ್ರೇಷನ್ ನಡೆದಿತ್ತು. ಈ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ತೀವ್ರ ಟೀಕೆಗೆ ಒಳಗಾದ ರಾಜ್ಯ ಸರ್ಕಾರ, ವಿಡಿಯೋ ಕ್ಲಿಪ್ ಅನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಿತ್ತು. ಇದೀಗ ಎಫ್ಎಸ್ಎಲ್ ವರದಿ ಆಧಾರದ ಮೇಲೆ ಮೊಹಮ್ಮದ್ ಶಫಿ ನಾಶಿಪುಡಿ, ಮುನ್ನಾವರ್ ಅಹಮ್ಮದ್, ಮೊಹಮ್ಮದ್ ಇಲ್ತಾಜ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಈ ಮೂವರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಹೆಚ್ಚುವರಿ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.
ಇದನ್ನೂ ಓದಿ : ನೆಲಮಂಗಲ : ಬೈಕ್ನಲ್ಲಿ ವೇಗವಾಗಿ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ.. ಸವಾರ ಸಾವು, ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ..!