ಕೆ.ಜಿ.ಎಫ್, ಕಾಂತಾರ ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿ, ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ಹೊಂಬಾಳೆ ಫಿಲಂಸ್ ಮೂಲಕ ನಿರ್ಮಾಣವಾಗಿರುವ ಮತ್ತೊಂದು ಅದ್ದೂರಿ ಕನ್ನಡ ಚಿತ್ರ “ಯುವ”. ದೊಡ್ಮನೆ ಮೊಮ್ಮಗ ಯುವ ರಾಜಕುಮಾರ್ ಈ ಚಿತ್ರದ ಮೂಲಕ ನಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಮೂಲಕ ವಿಜಯ ಕಿರಗಂದೂರ್ ಹಾಗೂ ಚೆಲುವೇಗೌಡ ಅವರು ನಿರ್ಮಾಣ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ಸಂಸ್ಥೆಯಿಂದಲೇ ನಿರ್ಮಾಣವಾಗಿದ್ದ ಪುನೀತ್ ರಾಜಕುಮಾರ್ ಅಭಿನಯದ “ರಾಜಕುಮಾರ” ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ್ ಆನಂದರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಇತ್ತೀಚೆಗಷ್ಟೇ ಬಹು ನಿರೀಕ್ಷಿತ “ಯುವ” ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಮಾರ್ಚ್ 29 ರಂದು ತೆರೆ ಕಾಣಲಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಸುಮಧುರ ಹಾಡುಗಳು “ಯುವ” ಚಿತ್ರದಲ್ಲಿದ್ದು, ಕನ್ನಡದ ಹೆಸರಾಂತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಬಾರಿ ಮೊತ್ತಕ್ಕೆ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ.
ಫಸ್ಟ್ ಲುಕ್ ಪೋಸ್ಟರ್ ನಿಂದ ಜನರ ಗಮನ ಸೆಳೆದಿರುವ “ಯುವ” ಚಿತ್ರದ ಹಾಡುಗಳು ಮಾರ್ಚ್ ಮೊದಲವಾರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಟೀಸರ್ ಹಾಗೂ ಟ್ರೇಲರ್ ಸಹ ಸದ್ಯದಲ್ಲೇ ರಿಲೀಸ್ ಆಗಲಿದೆ.
ಯುವ ರಾಜಕುಮಾರ್ ಅವರ “ಯುವ” ಚಿತ್ರದ ಗೆಟಪ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಯುವ ರಾಜಕುಮಾರ್ ಅವರಿಗೆ ನಾಯಕಿಯಾಗಿ “ಕಾಂತಾರ” ಬೆಡಗಿ ಸಪ್ತಮಿ ಗೌಡ ನಟಿಸಿದ್ದಾರೆ. ಅಚ್ಯುತಕುಮಾರ್, ಸುಧಾರಾಣಿ, ಕಿಶೋರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಶ್ರೀಶ ಕುದುವಳ್ಳಿ ಈ ಚಿತ್ರದ ಛಾಯಾಗ್ರಾಹಕರು.
ಇದನ್ನೂ ಓದಿ : ಶಾಸಕರಿಗೆ ಆಮಿಷ ಆರೋಪ : ರಾಜ್ಯಸಭಾ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿ ನಾಲ್ವರ ವಿರುದ್ಧ FIR..!