ನವದೆಹಲಿ : ಕೇಂದ್ರ ಸರ್ಕಾರ ಈ ಬಾರಿ ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನ ಮಂತ್ರಿಗಳಾದ ಪಿ ವಿ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಹಾಗೂ ದೇಶದ ಹಸಿರು ಕ್ರಾಂತಿಯ ಹರಿಕಾರ ಡಾ ಎಂ ಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಗೌರವ ನೀಡುವುದಾಗಿ ಹೇಳಿದ್ದಾರೆ.
ಚೌಧರಿ ಚರಣ್ ಸಿಂಗ್ ಅವರು 1979ರ ಜುಲೈ 28 ರಂದು ಪ್ರಧಾನಿ ಹುದ್ದೆಗೇರಿದ್ದರು. ಉತ್ತರಪ್ರದೇಶದಲ್ಲಿ ಎರಡು ಬಾರಿ ಸಿಎಂ ಆಗಿದ್ದ ಚೌಧರಿ ಚರಣ್ ಸಿಂಗ್, ಕೇಂದ್ರ ಸರ್ಕಾರದಲ್ಲಿ ಹಲವು ಮಹತ್ತರ ಖಾತೆಗಳನ್ನು ನಿರ್ವಹಿಸಿದ್ದರು. ಚೌಧರಿ ಚರಣ್ ಸಿಂಗ್ ಕಾನೂನು ಸಚಿವರಾಗಿಯೂ ಖ್ಯಾತಿ ಗಳಿಸಿದ್ದರು. ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಉಪಪ್ರಧಾನಿಯೂ ಆಗಿದ್ದರು.
ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರು 1991 ರಿಂದ 1996ರ ಅವಧಿಯಲ್ಲಿ ಭಾರತದ 9ನೇ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೇ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಹಲವು ವರ್ಷಗಳ ಕಾಲ ಸಂಸತ್ ಮತ್ತು ವಿಧಾನಸಭೆ ಸದಸ್ಯರಾಗಿದ್ದರು. ನರಸಿಂಹ ರಾವ್ ಅವರು ಪ್ರಧಾನ ಮಂತ್ರಿಯಾಗಿ ಭಾರತವನ್ನು ಜಾಗತಿಕ ಮಾರುಕಟ್ಟೆಗಳಿಗೆ ತೆರೆದ ಮಹತ್ವದ ಕ್ರಮಗಳನ್ನು ಕೈಗೊಂಡರು.
ಎಂ.ಎಸ್ ಸ್ವಾಮಿನಾಥನ್ ಅವರು ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಹೆಸರುವಾಸಿಯಾಗಿದ್ದರು. ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿ ಮಾಡಿದ್ದ ಸ್ವಾಮಿನಾಥನ್ ಅವರು ಭಾರತದ ಆಹಾರ ಭದ್ರತೆಯನ್ನು ಹೆಚ್ಚಿಸಲು ಅವಿರತವಾಗಿ ಹೋರಾಟ ನಡೆಸಿದ್ದರು. ಸ್ವಾಮಿನಾಥನ್ 1925ರ ಆಗಸ್ಟ್ 7ರಂದು ತಮಿಳುನಾಡಿನ ತಂಜಾವೂರಿನ ಕುಂಭಕೋಣಂನಲ್ಲಿ ಜನಿಸಿದ್ದರು. ಕೃಷಿ ವಿಜ್ಞಾನಿ, ಹವಾಮಾನ ತಜ್ಞರೂ ಆಗಿದ್ದ ಸ್ವಾಮಿನಾಥನ್ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭಾಷಣ, ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಇಂದಿರಾ ಗಾಂಧಿ ಪ್ರಶಸ್ತಿಗಳೂ ಸ್ವಾಮಿನಾಥನ್ ಅವರಿಗೆ ಲಭಿಸಿವೆ.
1960 ಹಾಗೂ 70ರ ದಶಕದಲ್ಲಿ ಭಾರತ ದೇಶ ಆಹಾರ ಅಭದ್ರತೆಯ ಸಮಸ್ಯೆಗೆ ಸಿಲುಕಿತ್ತು. ಆ ಸಂದರ್ಭದಲ್ಲಿ ಸ್ವಾಮಿನಾಥನ್ ಅವರ ಸಾಧನೆ ಗಮನಾರ್ಹವಾಗಿದೆ. ಕೇಂದ್ರ ಸರ್ಕಾರ ರಚಿಸಿದ್ದ ಹಸಿರು ಕ್ರಾಂತಿಯ ಯೋಜನೆಯಲ್ಲಿ ಸ್ವಾಮಿನಾಥನ್ ಅವರು ಕೆಲಸ ಮಾಡಿದ್ದರು. ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನದ ಮೂಲಕ ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಹೆಚ್ಚಿಸುವಲ್ಲಿ ಸ್ವಾಮಿನಾಥನ್ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ : ಬೋನ್ಗೆ ಸಿಲುಕಿದ ಹುಲಿ ಗಾಯಗೊಂಡಿದ್ರೂ ಚಿಕಿತ್ಸೆ ಕೊಡಿಸದೆ ಕೇರಳಕ್ಕೆ ಓಡಿಸಿದ ಕರ್ನಾಟಕ ಅರಣ್ಯ ಇಲಾಖೆ..!