ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಹಾಡಿ ಹೊಗಳಿದ್ದಾರೆ. ನಿವೃತ್ತರಾಗಲಿರುವ ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆ ಸಂದರ್ಭದಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಮೋದಿ, ಡಾ.ಮನಮೋಹನ್ ಸಿಂಗ್ ಅವರ ಬಗ್ಗೆ ಮಾತನಾಡಿದ್ದಾರೆ. ನಾನು ಇಂದು ಮನಮೋಹನ್ ಸಿಂಗ್ ಅವರನ್ನು ಸ್ಮರಿಸುತ್ತೇನೆ. ಅವರ ಕೊಡುಗೆ ಅಪಾರವಾಗಿದೆ. ಡಾ.ಮನಮೋಹನ್ ಸಿಂಗ್ ಅವರು ಇಷ್ಟು ದಿನ ಈ ಸದನ ಮತ್ತು ದೇಶಕ್ಕೆ ಮಾರ್ಗದರ್ಶನ ನೀಡಿದ ರೀತಿ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ.
ಸದನದಲ್ಲಿ ಮತದಾನದ ವೇಳೆ ಆಡಳಿತ ಪಕ್ಷವೇ ಗೆಲ್ಲುತ್ತದೆ ಎಂದು ಗೊತ್ತಿದ್ದರೂ ಡಾ.ಮನಮೋಹನ್ ಸಿಂಗ್ ವ್ಹೀಲ್ ಚೇರ್‌ನಲ್ಲಿ ಬಂದು ಮತ ಚಲಾಯಿಸಿದ್ದು ಕೂಡ ನನಗೆ ಚೆನ್ನಾಗಿ ನೆನಪಿದೆ. ಅವರು ಯಾರಿಗೆ ಅಧಿಕಾರ ಕೊಡಲು ಬಂದಿದ್ದರು ಎಂಬುದು ಪ್ರಶ್ನೆಯಲ್ಲ. ಅವರು ಪ್ರಜಾಪ್ರಭುತ್ವಕ್ಕೆ ಶಕ್ತಿ ನೀಡಲು ಬಂದಿದ್ದರು ಎಂದು ನಾನು ನಂಬುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಇನ್ನು ಇದೇ ವೇಳೆ ಕಾಂಗ್ರೆಸ್ನ ಕಪ್ಪುಪತ್ರ ಬಿಡುಗಡೆಗೆ ತಿರುಗೇಟು ಕೊಟ್ಟಿರುವ ಪ್ರಧಾನಿ, ದುಷ್ಟ ಕಣ್ಣುಗಳಿಂದ ರಕ್ಷಿಸಲು ಮನೆಯಲ್ಲಿ ಮಕ್ಕಳಿಗೆ ಹೇಗೆ ಕಪ್ಪು ಹಚ್ಚುತ್ತೇವೋ ಹಾಗೆಯೇ ಸರ್ಕಾರ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು, ದುಷ್ಟರ ಕಣ್ಣುಗಳಿಂದ ರಕ್ಷಿಸಲು ಕಾಂಗ್ರೆಸ್ ಹೊರಡಿಸಿರುವ ಕಪ್ಪು ಪತ್ರವೂ ನಮಗೆ ದೃಷ್ಟಿಬೊಟ್ಟಿದ್ದಂತೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ : ಬೆಳಗಾವಿ : ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ – ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ..!